ಬೆಂಗಳೂರು: ನೂತನ ರಾಷ್ಟ್ರಪತಿ ಆಯ್ಕೆಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾರರಾಗಿರುವ ರಾಜ್ಯದ ಶಾಸಕರು ಅತ್ಯುತ್ಸಾಹದಿಂದ ಮತದಾನ ಮಾಡಿದರು.
ವಿಧಾನಸೌಧದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮತದಾನ ಆರಂಭವಾಯಿತು.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮೊದಲಿಗರಾಗಿ ಮತ ಚಲಾಯಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಆಗಮಿಸುವ ಮೂಲಕ ಗಮನ ಸೆಳೆದರು.
ರಾಜ್ಯ ವಿಧಾನಸಭೆಯ 224 ಚುನಾಯಿತ ಸದಸ್ಯರು ಇಲ್ಲಿ ಮತದಾನ ಮಾಡುತ್ತಿದ್ದು, ವಿಶೇಷ ಮೈಸೂರು- ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ. ಶ್ರೀನಿವಾಸ ಪ್ರಸಾದ್ ಮತ್ತು ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಆಯೋಗದ ಅನುಮತಿಯೊಂದಿಗೆ ಸಂವಿಧಾನ ಸೌಧದ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ.