ಬೆಂಗಳೂರು ,ಜು.19– ಕಳೆದ ಕೆಲವು ದಿನಗಳಿಂದ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ 2,175 ಹೆಕ್ಟೇರ್‌ಗೂ ಅಧಿಕ ಪ್ರದೇಶದ ಕೃಷಿ ಬೆಳೆ ಹಾನಿಗೊಳಗಾಗಿದೆ ಎಂದು ಕಂದಾಯ ಇಲಾಖೆಯ ಪ್ರಾಥಮಿಕ ವರದಿಗಳು ತಿಳಿಸಿವೆ.
ಕಂದಾಯ ಇಲಾಖೆಯ ಪ್ರಾಕೃತಿಕ ವಿಕೋಪ ನಿಯಂತ್ರಣ ವಿಭಾಗ ಸರ್ಕಾರಕ್ಕೆ ಸಲ್ಲಿಸಿರುವ ಪ್ರಾಥಮಿಕ ವರದಿಯ ಪ್ರಕಾರ ಮಳೆಯಿಂದಾಗಿ ಜುಲೈ ತಿಂಗಳಿನಲ್ಲಿ 7 ಜಿಲ್ಲೆಯ 2,175 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಗೊಳಗಾಗಿದೆ. ಪ್ರಮುಖವಾಗಿ ಭತ್ತ, ಮೆಕ್ಕೆಜೋಳ, ಅಲಸಂದೆ, ಶೇಂಗಾ ಮತ್ತಿತರ ಬೆಳೆಗಳು ನೀರು ನಿಂತು ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಮೋಡ ಕವಿದ ವಾತಾವರಣದಿಂದ ಭೂಮಿ ತೇವಾಂಶದಿಂದ ಕೂಡಿರುವುದೂ ಹಾನಿ ಪ್ರಮಾಣ ಹೆಚ್ಚು ಮಾಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 640 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ ಬಹುತೇಕ ಜಲಾವೃತವಾಗಿದೆ. ದಕ್ಷಿಣ ಕನ್ನಡದಲ್ಲಿ 223 ಮತ್ತು ಉಡುಪಿ ಜಿಲ್ಲೆಯಲ್ಲಿ 129 ಹೆಕ್ಟೇರ್, ಉ.ಕನ್ನಡದಲ್ಲಿ 46 ಹೆಕ್ಟೇರ್ ಭತ್ತದ ಬೆಳೆಗೆ ಹಾನಿಯಾಗಿದೆ.
ಹಾವೇರಿ ಜಿಲ್ಲೆಯಲ್ಲಿ 270 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ವರುಣಾಕ್ರೋಶಕ್ಕೆ ತುತ್ತಾಗಿದೆ.ಹಾಸನ, ಮೈಸೂರು, ಜಿಲ್ಲೆಯಲ್ಲೂ ಮೆಕ್ಕೆಜೋಳಕ್ಕೆ ಹಾನಿ ಉಂಟಾಗಿದೆ. ಹಾಸನ ಜಿಲ್ಲೆಯಲ್ಲಿ 173 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಅಲಸಂದೆ, ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದ ಶೇಂಗಾ ಮಳೆಯ ಹೊಡೆತಕ್ಕೆ ನಲುಗಿದೆ.
ನಿಲ್ಲದ ಪ್ರವಾಹ :
ರಾಜ್ಯದ ಬಹುತೇಕ ಕಡೆ ಮಳೆ ಇಳಿಮುಖವಾಗಿದೆ. ಆದರೂ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹೊರಗೆ ಬಿಡುತ್ತಿರುವುದರಿಂದ ಕೆಲವೆಡೆ ಪ್ರವಾಹ ಮುಂದುವರೆದಿದೆ.
ತುಂಗಭದ್ರಾ ಜಲಾಶಯದಿಂದ 1.38 ಲಕ್ಷ ಕ್ಯುಸೆಕ್ಸ್ ನೀರು ಬಿಡಲಾಗಿದ್ದು ಹಂಪೆಯ ಸ್ಮಾರಕಗಳು ಮುಳುಗಡೆಯಾಗಿವೆ. ಬೆಳಗಾವಿಯ ಚಿಕ್ಕೋಡಿ ತಾಲೂಕಿನಲ್ಲಿ 9 ಸೇತುವೆಗಳು ಇನ್ನೂ ಮುಳುಗಿವೆ. ಆಲಮಟ್ಟಿಅಣೆಕಟ್ಟೆಯಿಂದ 1.25 ಲಕ್ಷ ಕ್ಯುಸೆಕ್ಸ್ ನೀರು ಹೊರಬಿಡಲಾಗುತ್ತಿದೆ.
ರಸ್ತೆಯಲ್ಲಿ ಬಿರುಕು :
ಚಾರ್ಮಾಡಿ ಘಾಟ್ ರಸ್ತೆಯಲ್ಲೂ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ರಸ್ತೆ ಕುಸಿಯುವ ಹಾಗೂ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನ ರಸ್ತೆಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಬ್ಯಾರಿಕೇಡ್ ಇಟ್ಟು ಕುಸಿದ ಜಾಗದಲ್ಲಿ ವಾಹನ ಸಂಚರಿಸದಂತೆ ತಡೆ ಒಡ್ಡಲಾಗಿದೆ.