ಆದಿಕವಿ ಪಂಪನ ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿದ್ದು, ಸಿನಿಮಾದ ಹೆಸರು “ಪಂಪ’ ಆಗಿದ್ದರೂ ಪಂಪನಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ.
ಆದರೆ ಸಿನಿಮಾದ ಕಥೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿಷಯಗಳಿರುವುದು ಹಾಗೂ ಸಿನಿಮಾದ ಕಥೆಗೆ ಹೊಂದಾಣಿಕೆಯಾಗುವ ಕಾರಣಕ್ಕೆ ಚಿತ್ರತಂಡ “ಪಂಪ’ ಟೈಟಲ್ ಇಡಲಾಗಿದೆ.
ಪಂಪ’ ಸಿನಿಮಾಕ್ಕೆ ಹಿರಿಯ ನಿರ್ದೇಶಕ ಎಸ್. ಮಹೇಂದರ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಹಂಸಲೇಖ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ “ಪಂಪ’ ಬಿಡುಗಡೆಯ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಇತ್ತೀಚೆಗಷ್ಟೇ “ಪಂಪ’ನ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾತನಾಡಿತು.
ಮೊದಲಿಗೆ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಎಸ್. ಮಹೇಂದರ್, “ಇದೊಂದು ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಶೈಲಿಯ ಕನ್ನಡ ಸಿನಿಮಾ. “ಪಂಪ’ ಎನ್ನುವುದು ಸಿನಿಮಾದಲ್ಲಿ ಪಂಚಳ್ಳಿ ಪರಶಿವಮೂರ್ತಿ ಎನ್ನುವ ಕನ್ನಡ ಉಪನ್ಯಾಸಕನ ಹೆಸರಿನ ಸಂಕ್ಷಿಪ್ತ ರೂಪ. ಆ ಉಪನ್ಯಾಸಕನ ಸುತ್ತ ಕನ್ನಡ ವಿಷಯವನ್ನು ಇಟ್ಟುಕೊಂಡು ಈ ಸಿನಿಮಾದ ಕಥೆ ಸಾಗುತ್ತದೆ. ನನ್ನ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಕನ್ನಡದ ವಿಷಯವನ್ನು ಇಟ್ಟುಕೊಂಡು ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ನಿರ್ದೇಶಿಸಿದ್ದೇನೆ’ ಎಂದರು.
ನಿರ್ಮಾಪಕ ವಿ. ಲಕ್ಷ್ಮೀಕಾಂತ್ (ಕಾಲವಿ), ಸಂಗೀತ ನಿರ್ದೇಶಕ ಹಂಸಲೇಖ “ಪಂಪ’ ಸಿನಿಮಾ ನಿರ್ಮಾಣವಾದ ಹಿಂದಿನ ಕಥೆಯನ್ನು ಮೆಲುಕು ಹಾಕಿದರು.