ಬೆಂಗಳೂರು: ರಾಜ್ಯದ ವರ್ಬ್ಯಾಟಲ್ ಸಂಸ್ಥೆ ಶಾಲಾ ಮಕ್ಕಳಿಗಾಗಿ ರಾಜ್ಯಮಟ್ಟದ ವರ್ಬ್ಯಾಟಲ್ ಕನ್ನಡ ಹಾಗು ಇಂಗ್ಲಿಷ್ ವಾದಸ್ಪರ್ಧೆ(ಡಿಬೇಟ್) ಹುಬ್ಬಳ್ಳಿಯಲ್ಲಿ ಗುರುವಾರ ಹಾಗು ಶುಕ್ರವಾರ(ಜು.21, 22) ನಡೆಯಲಿದೆ.
ಹುಬ್ಬಳ್ಳಿಯ ವಿದ್ಯಾನಗರದ ಅಕ್ಷಯ್ ಕಾಲೊನಿಯಲ್ಲಿರುವ ಐಬಿಎಂಆರ್ ಗ್ರೂಪ್ ಆಫ್ ಕಾಲೇಜಿನ ಆವರಣದಲ್ಲಿ ಈ ಸ್ಪರ್ಧೆಗಳು ನಡೆಯಲಿವೆ.
ಕಳೆದ 18 ವರ್ಷಗಳಿಂದ ನಿರಂತರವಾಗಿ ವಾದಸ್ಪರ್ಧೆಗಳನ್ನು ಆಯೋಜಿಸುತ್ತಿರುವ ವರ್ಬ್ಯಾಟಲ್ ಸಂಸ್ಥೆ, ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲೂ ವಾದಸ್ಪರ್ಧೆಗಳನ್ನು ಆಯೋಜಿಸುತ್ತಿದೆ.
ವಿದ್ಯಾರ್ಥಿಗಳ ಜ್ಞಾನ, ಬುದ್ಧಿಮತ್ತೆ ಹಾಗೂ ವಾಕ್ಚತುರತೆಯ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧಿಗಳಿಗೆ ಪ್ರಬಲ ವಾದ ಮಂಡಿಸಲು ಇದು ಅತ್ಯುತ್ತಮ ವೇದಿಕೆಯಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಏಳರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 12 ರಿಂದ 16 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿದೆ.
ವಾದಸ್ಪರ್ಧೆಯ ವಿಜೇತ ತಂಡಕ್ಕೆ 20 ಸಾವಿರ ರೂ. ಬಹುಮಾನ ಸಿಗಲಿದೆ. ಅಲ್ಲದೆ, ಸ್ಪರ್ಧೆಯ ಅಂತಿಮ ಸುತ್ತು ತಲುಪುವ ಎರಡು ತಂಡಗಳಿಗೆ ತಲಾ ಐದು ಸಾವಿರ ರೂ. ದೊರೆಯಲಿದೆ.