ಬೆಂಗಳೂರು : ಇತ್ತೀಚೆಗೆ ನಡೆದ ಹುಬ್ಬಳ್ಳಿಯ ಗುಂಪು ಗಲಭೆಯ ಹಿಂದೆ ಬಿಜೆಪಿ ಕೈವಾಡವಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ದ ಕೇಳಿಬಂದಿರುವ ಶೇ.40ರಷ್ಟು ಕಮಿಷನ್ ಆರೋಪದಿಂದ ಉಂಟಾಗುತ್ತಿರುವ ಮುಜುಗರವನ್ನು ತಪ್ಪಿಸಿಕೊಳ್ಳಲು ವಿಷಯಾಂತರ ಮಾಡಲು ಗಲಭೆಗೆ ಪಿತೂರಿ ಮಾಡಲಾಗಿದೆ ಎಂದು ಆಪಾದಿಸಿದರು.
ಗಲಭೆಯ ವೇಳೆ ಶಾಂತಿ ಕಾಪಾಡಲು ಕಾಂಗ್ರೆಸ್‍ನ ಎಲ್ಲಾ ನಾಯಕರು ಪ್ರಯತ್ನ ಪಟ್ಟಿದ್ದಾರೆ. ಕೆಲವು ಕಿಡಿಗೇಡಿಗಳು ಕಾನೂನು ಕೈಗೆ ತೆಗೆದುಕೊಳ್ಳಲು ಯತ್ನಿಸಿದಾಗ ಪೊಲೀಸರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಸೇರಿದಂತೆ ನಮ್ಮ ನಾಯಕರಿಗೆ ಮನವಿ ಮಾಡಿ ಪರಿಸ್ಥಿತಿ ತಿಳಿಗೊಳಿಸಲು ಕೇಳಿ ಕೊಂಡಿದ್ದಾರೆ. ಆ ಮನವಿಯ ಪ್ರಕಾರ ನಮ್ಮ ಮುಖಂಡರು ಸ್ಥಳಕ್ಕೆ ಹೋಗಿದ್ದು ಶಾಂತಿಯಿಂದಿರಲು ಜನರಲ್ಲಿ ಮನವಿ ಮಾಡಿದ್ದಾರೆ. ಆ ವೇಳೆ ಅಲ್ತಾಫ್ ಅವರಿಗೆ ಪೆಟ್ಟು ಬಿದಿದೆ. ನೋವು ಉಂಡರೂ ಶಾಂತಿ ಪಾಲನೆ ಶತ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.