ಬೆಂಗಳೂರು,ಜು.29- ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನವಾದ ಆ.15ರಂದು ದಕ್ಷಿಣ ಭಾರತದ 3 ಪ್ರಮುಖ ಮಠಗಳ ಮೇಲೆ ಭಯೋತ್ಪಾದಕ ದಾಳಿಯನ್ನು ಮಾಡುವ ಸಂಚನ್ನು ತಮಿಳುನಾಡು ಹಾಗು ಕರ್ನಾಟಕ ಪೊಲೀಸರು ವಿಫಲಗೊಳಿಸಿದ್ದಾರೆ.
ಈ ಪ್ರಕರಣದಲ್ಲಿ ಎರಡೂ ರಾಜ್ಯಗಳ ಪೊಲೀಸರು ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ಜಿಹಾದಿ ಸಂಘಟನೆಗಳಿಗೆ ಸೇರಿದ ನಾಲ್ವರು ಜಿಹಾದಿ ಭಯೋತ್ಪಾದಕರನ್ನು ಬಂಧಿಸಿದ್ದಾರೆ.
ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಜು.25 ರಂದು ತಮಿಳುನಾಡು ಪೊಲೀಸರು ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಹೊಂದಿದ್ದ ಆಸಿಫ್ ಮುಸ್ತಿನ್ ಮತ್ತು ಯಾಸಿರ್ ನವಾಬ್ ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ, ಆಸಿಫ್ 30ಮಂದಿಯ ಜನರ ಜಾಲವನ್ನು ರಚಿಸಿದ್ದು, ಅವರು ಒಂದು ತಿಂಗಳ ಮುಂಚಿತವಾಗಿಯೇ ಮಠಗಳ ರೆಕ್ಕಿ (ಸ್ಥಳಾನ್ವೇಷಣೆ) ಕಾರ್ಯಗಳನ್ನು ನಡೆಸುತ್ತಿದ್ದರು ಮತ್ತು ದಾಳಿಗೆ ಬೇಕಾದ ಸ್ಫೋಟಕಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು.
ಜುಲೈ 26 ರಂದು ನಗರ ಪೊಲೀಸರು ಅಖ್ತರ ಹುಸೇನ ಲಷ್ಕರ್ ಮತ್ತು ಮೊಹಮ್ಮದ್ ಜುಬಾ ನನ್ನು ಬಂಧಿಸಿದ್ದರು. ವಿಚಾರಣೆಯ ವೇಳೆ ‘ಅವರು ಹಿಂದೂಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಮುಂದಾಗಿದ್ದರು’ ಎಂಬುದು ತಿಳಿದುಬಂದಿದೆ. ಅವರು ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್ ಕೈದಾಗೆ ಸೇರುವ ಪ್ರಯತ್ನವೂ ನಡೆಸಿದ್ದರು. ಅವರು ಸೌದಿ ಅರೇಬಿಯಾ ಮತ್ತು ಅಫ್ಘಾನಿಸ್ತಾನದಲ್ಲಿ ಜಾಲವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದರು. ಅವರು ‘ಟೆಲಿಗ್ರಾಂ ಆಪ್’ ಮೂಲಕ ಮುಸ್ಲಿಂ ಯುವಕರನ್ನು ಒಗ್ಗೂಡಿಸಲು ಯತ್ನಿಸುತ್ತಿದ್ದರು. ಅವರು ಅಫ್ಘಾನಿಸ್ತಾನಕ್ಕೂ ಹೋಗಲು ಪ್ರಯತ್ನಿಸುತ್ತಿದ್ದರು. ‘ಭಾರತದಲ್ಲಿ ಮುಸ್ಲಿಮರನ್ನು ಮೂರನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸಲಾಗುತ್ತಿದೆ’, ಎಂದು ಅವರು ಹೇಳುತ್ತಿದ್ದರು. ಇಬ್ಬರಿಂದ ‘ಸರ್ ತಾನ್ ಸೆ ಜುದಾ’ (ತಲೆಯನ್ನು ಮುಂಡದಿಂದ ಬೇರ್ಪಡಿಸುವುದು) ಅಭಿಯಾನಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಲ್ವರೂ ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ.