ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಮತ್ತೊಂದು ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಹತ್ಯೆಯ ಹಿಂದಿನ ಪ್ರೀ ಪ್ಲಾನ್ ಪೊಲೀಸರ ತನಿಖೆಯಿಂದ ಬಯಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆಗೆಗಾಗಿ ಹಂತಕರು ಆತನ ಅಂಗಡಿಗೆ 500 ಮೀಟರ್ ಸಮೀಪದಲ್ಲಿಯೇ ಮನೆಯನ್ನು ಬಾಡಿಗೆ ಪಡೆದು ವಾಸವಾಗಿದ್ದರು ಎಂಬುದು ತಿಳಿದುಬಂದಿದೆ. ಪ್ರವೀಣ್ ಚಲನವಲನಗಳನ್ನು ಸಂಪೂರ್ಣವಾಗಿ ಗಮನಿಸಿದ್ದಾರೆ. ಪ್ರವೀಣ್ ಹತ್ಯೆಗೂ ಮುನ್ನ ಸ್ಟ್ರೀಟ್ ಲೈಟ್ ಆಫ್ ಮಾಡಿದ್ದರು ಎಂಬ ವಿಷಯ ತಿಳಿದುಬಂದಿದೆ. ಪ್ರಕರಣದಲ್ಲಿ ಆರೋಪಿ ಶಫೀಕ್ ಮತ್ತು ಝಕೀರ್ ಪಾತ್ರ ಕೂಡ ಬಯಲಾಗಿದೆ.
ಶಫೀಕ್ ಮನೆ ಬೆಳ್ಳಾರೆ ಮುಖ್ಯರಸ್ತೆಯಲ್ಲೇ ಇದೆ. ಆರೋಪಿ ಶಫೀಕ್ ಬಾಡಿಗೆ ಮನೆ ಪಡೆದು ತಂದೆ-ತಾಯಿ ಜೊತೆ ವಾಸವಿದ್ದ. ಇದೇ ಮನೆಯಲ್ಲಿ ಕುಳಿತು ಪ್ರವೀಣ್ ಹತ್ಯೆಗೆ ಬಲೆ ಹೆಣೆಯಲಾಗಿತ್ತು. ಆರೋಪಿ ಶಫೀಕ್ ಮನೆ ಬೆಳ್ಳಾರೆ ಠಾಣೆಯಿಂದ 300 ಮೀಟರ್ ಹಾಗು ಪ್ರವೀಣ್ ಅಂಗಡಿಯಿಂದ 500 ಮೀಟರ್ ದೂರದಲ್ಲಿತ್ತು. ಹಂತಕರು ಇದೇ ಮನೆಯಲ್ಲಿ ಕುಳಿತು ಪ್ರವೀಣ್ ಚಲನವಲನ ಗಮನಿಸುತ್ತಿದ್ದರು.
ಪ್ರವೀಣ್ ಹತ್ಯೆಗೂ ಏರಿಯಾದಲ್ಲಿ ಕರೆಂಟ್ ಇದ್ದರೂ ಪವರ್ ಕಟ್ ಆಗಿತ್ತು. ಆರೋಪಿಗಳು ಪ್ರವೀಣ್ ಅಂಗಡಿಯ 500 ಮೀಟರ್ ಸುತ್ತಮುತ್ತ ಪವರ್ ಕಟ್ ಮಾಡಿದ್ದರು. ನಂತರ ಪ್ರವೀಣ್ ಅಂಗಡಿ ಬಳಿ ತೆರಳಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ, ಯಾವ ಸಿಸಿಟಿವಿ ಕ್ಯಾಮರಾದಲ್ಲೂ ಆರೋಪಿಗಳ ಚಹರೆ ಸಿಕ್ಕಿಲ್ಲ. ಪ್ರವೀಣ್ ಹತ್ಯೆ ಬಳಿಕ ಶಫೀಕ್ ಮತ್ತು ಝಕೀರ್ ಹಂತಕರನ್ನು ಕರೆದೊಯ್ದಿದ್ದರು.
ಪ್ರವೀಣ್ ಹತ್ಯೆ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿದ್ದಾಗ 500 ಮೀಟರ್ ದೂರದಲ್ಲಿದ್ದ ಕರೆಂಟ್, ಕೊಲೆ ನಡೆದ ಜಾಗದ 500 ಮೀಟರ್ ಸುತ್ತಮುತ್ತ ಇರಲಿಲ್ಲ. ಕಗ್ಗತ್ತಲಲ್ಲೇ ಗಾಯಾಳುವನ್ನು ಶಿಫ್ಟ್ ಮಾಡಿದ್ದರು. ಸದ್ಯ ದಕ್ಷಿಣ ಕನ್ನಡ ಪೊಲೀಸರು ಸರ್ಚ್ ವಾರಂಟ್ ಪಡೆದು ಶಫೀಕ್ ಮನೆಯಲ್ಲಿ ಮಾರಕಾಸ್ತ್ರ ಏನಾದರು ಇದೆಯೇ ಎಂದು ಹುಡುಕಾಟ ನಡೆಸುತ್ತಿದ್ದಾರೆ.