ಮಂಗಳೂರು: ರಾಜ್ಯ ಸರ್ಕಾರ ಜನರ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಿದ್ದು, ಜನರಿಗೆ ಧೈರ್ಯ ಕೊಡುವ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆ ಮತ್ತು ರಾಜ್ಯದಲ್ಲಿ ಅತಿವೃಷ್ಟಿಯಾಗುತ್ತಿದೆ. ರಾಜ್ಯ ಸರ್ಕಾರ ಕಣ್ಣೊರೆಸುವ ಕೆಲಸ ಮಾಡದೆ ಜನರು ಅನಾಥರಾಗಿದ್ದಾರೆ. ಸುಳ್ಯ, ಸಂಪಾಜೆ ಭಾಗದಲ್ಲಿ ಜನರಿಗೆ ಮಳೆಯಿಂದ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಇನ್ನೂ ಅಧಿಕಾರಿಗಳ ಸಭೆ ನಡೆಸಿಲ್ಲ. ಜಿಲ್ಲೆಗೆ ಸಿಎಂ, ಕಂದಾಯ ಸಚಿವರು ಭೇಟಿ ನೀಡಿದರೂ ಏನೂ ಕೆಲಸವಾಗಿಲ್ಲ ಎಂದರು.
ಎನ್‌ಡಿಆರ್ ಎಫ್ ಅನುದಾನವನ್ನ ಕೇಂದ್ರದಿಂದ ಕೇಳಲು ರಾಜ್ಯ ಸರ್ಕಾರಕ್ಕೆ ಧೈರ್ಯವಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದಾಗ ಇಲ್ಲಿನ ಜನರ ಸಮಸ್ಯೆ ಮತ್ತು ಅನುದಾನದ ಬಗ್ಗೆ ಮನವಿಯೇ ಮಾಡಿಲ್ಲ. ಬದಲಾಗಿ ಪಕ್ಷದ ಬಗ್ಗೆ ಚರ್ಚೆ ಮಾಡುತ್ತಾರೆ. ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ. ಪಕ್ಷ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಸಂಸದರು ರಾಜ್ಯಕ್ಕೆ ಸಿಗಬೇಕಾದ ಅನುದಾನ ಕೇಳುವ ಬದಲು ಮೌನವಾಗಿದ್ದಾರೆ ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕಿಡಿಕಾಡಿದ್ದಾರೆ.