ಲಖನೌ(ಉತ್ತರ ಪ್ರದೇಶ),ಆ.10-75ನೇ ಸ್ವಾತಂತ್ರ್ಯದ ದಿನದಂದು ದೇಶದಲ್ಲಿ ಉಗ್ರ ದಾಳಿ ನಡೆಸುವ ಸಂಚು ರೂಪಿಸಿದ್ದ ಅಸಾದುದ್ದೀನ್ ಓವೈಸಿ ಪಕ್ಷದ ಸದಸ್ಯ, ಐಸಿಸ್ ಉಗ್ರರ ನಂಟು ಹೊಂದಿದ್ದ ಭಯೋತ್ಪಾದಕನೊಬ್ಬನನ್ನು ರಾಜ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಜಂಗಢ ಜಿಲ್ಲೆಯ ಅಮಿಲೋ ಪ್ರದೇಶದ ಎಲೆಕ್ಟ್ರೀಷಿಯನ್ ಆಗಿದ್ದ ಎಐಎಂಐಎಂ ಪಕ್ಷದ ಸಬಾವುದ್ದೀನ್ ಅಜ್ಮಿ ಆಲಿಯಾಸ್ ಬೈರಾಮ್ ಖಾನ್ ಬಂಧಿತ ಉಗ್ರನಾಗಿದ್ದಾನೆ. ಉಗ್ರ ಸಬಾವುದ್ದೀನ್ ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖರನ್ನು ಕೊಲೆ ಮಾಡುವ ಗುರಿಯನ್ನು ನೀಡಲಾಗಿತ್ತು. ಹೀಗಾಗಿ ಆರ್‌ಎಸ್‌ಎಸ್ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ಮತ್ತು ಫೇಸ್‌ಬುಕ್ ಖಾತೆಯನ್ನು ರಚಿಸಿ ಅದರಿಂದ ನಾಯಕರ ಸಂಪರ್ಕ ಬೆಳೆಸಿಕೊಳ್ಳುತ್ತಿದ್ದ.
ಮುಂಬೈನಲ್ಲಿ ಈ ಮೊದಲು ಎಲೆಕ್ಟ್ರೀಷಿಯನ್ ಆಗಿದ್ದ ಉಗ್ರ ಅಜ್ಮಿ ಐಸಿಸ್ ವಿಚಾರಧಾರೆಗಳಿಗೆ ಒಳಗಾಗಿ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್, ಷರಿಯಾ ಕಾನೂನು ಜಾರಿ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿದ್ದ. ಜನರಿಗೆ ಹಲವು ಆಮಿಷವೊಡ್ಡಿ ಸಾಮಾಜಿಕ ಮಾಧ್ಯಮಗಳಲ್ಲಿ ಐಸಿಸ್ ಬಗ್ಗೆ ಪ್ರಚಾರ ಮಾಡಲು ಪ್ರೇರೇಪಿಸುತ್ತಿದ್ದ. ಈತ ಹಲವಾರು ವಿಡಿಯೋಗಳನ್ನು ಮಾಡಿ ಹರಿಬಿಟ್ಟಿದ್ದ.
ಉಗ್ರ ಅಜ್ಮಿ ವಿಚಾರಣೆಗೆ ಒಳಪಡಿಸಿ, ಆತನ ಮೊಬೈಲ್ ಪರಿಶೀಲಿಸಿದಾಗ ಭಯೋತ್ಪಾದನೆ ಸೃಷ್ಟಿಸಲು ಐಸಿಸ್ನ ಟೆಲಿಗ್ರಾಮ್ ಚಾನೆಲ್ “ಅಲ್-ಸಕ್ರ್ ಮೀಡಿಯಾ”ಗೆ ಸೇರಿಕೊಂಡಿದ್ದ ಎಂಬುದು ಬೆಳಕಿಗೆ ಬಂದಿದೆ.
ಪಾಕ್ ಜೊತೆ ನಂಟು:
ಈ ಉಗ್ರನ ಜಾಡು ಪತ್ತೆ ಮಾಡಿದಷ್ಟು ವಿಸ್ತಾರವಾಗುತ್ತಿದೆ. ಉತ್ತರಪ್ರದೇಶದಲ್ಲಿ ಇದ್ದುಕೊಂಡೇ ಆಫ್ರಿಕಾದಿಂದ ನಡೆಸಲಾಗುತ್ತಿರುವ ಉಗ್ರ ಸಂಘಟನೆಯಾದ ಅಬುಬಕರ್ ಅಲ್ ಸೋಮಾನಿ ಗ್ರೂಪ್ನ ಭಾಗವಾಗಿದ್ದ. ಇದರಿಂದ ಆತ ಬಾಂಬ್ ತಯಾರಿಸುವ ಬಗ್ಗೆ ಮಾಹಿತಿ ಪಡೆಯುತ್ತಿದ್ದ. ಇದಲ್ಲದೇ, ಪಾಕಿಸ್ತಾನ, ಸಿರಿಯಾ, ಇರಾಕ್ನ ಐಸಿಸ್ ಉಗ್ರರ ಜೊತೆಗೂ ನಂಟು ಹೊಂದಿದ್ದ ಎಂಬುದು ತಿಳಿದು ಬಂದಿದೆ.
ಎಲೆಕ್ಟ್ರಾನಿಕ್ ಬಾಂಬ್, ಗ್ರೆನೇಡ್ನಂತಹ ಅಪಾಯಕಾರಿ ಸ್ಫೋಟಕಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ಕಲಿತಿದ್ದ. ಐಸಿಸ್ಗೆ ದೇಶದ ಮುಸ್ಲಿಂ ಯುವಕರ ಸೇರುವಂತೆ ಪ್ರೇರೇಪಿಸುತ್ತಿದ್ದ. ಬಂಧಿತನಿಂದ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಕಾರ್ಟ್ರಿಡ್ಜ್‌ಗಳು, ಬಾಂಬ್‌ಗಳನ್ನು ತಯಾರಿಸಲು ಬಳಸುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಉಗ್ರನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ ಹಾಗು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಕೊಲ್ಲುವ ಟಾಸ್ಕ್:
ಇನ್ನು ಆತಂಕಕಾರಿ ವಿಚಾರವೆಂದರೆ ಬಂಧಿತ ಉಗ್ರ ಸಬಾವುದ್ದೀನ್ ಅಜ್ಮಿಗೆ ಆರ್‌ಎಸ್‌ಎಸ್ ನಾಯಕರನ್ನು ಕೊಲ್ಲುವ ಟಾಸ್ಕ್ ನೀಡಲಾಗಿತ್ತು. ದೇಶದಲ್ಲಿ ಹಲವು ಕೋಮು ಗಲಭೆಗಳಿಗೆ ಸಂಘ ಕಾರಣ ಎಂದು ತಿಳಿದಿದ್ದ ಈತ, ಪ್ರಮುಖರ ಹತ್ಯೆಗೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.