ಮಡಿಕೇರಿ : ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಹಾಗು ಮಾಂಸದೂಟದ ನಂತರ ದೇವಾಲಯಕ್ಕೆ ತೆರಳಿದ ವಿವಾದಗಳ ಹಿನ್ನೆಲೆಯಲ್ಲಿ ಕರ್ನಾಟಕದ ಕಾಶ್ಮೀರ ಕೊಡಗು ಇದೀಗ ವಿವಾದದ ಕೇಂದ್ರವಾಗಿದೆ.
ಮೊಟ್ಟೆ ಎಸೆದ ಘಟನೆ ವಿರೋಧಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಗಸ್ಟ್ 26 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ದತೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡಾ ಅಂದೇ ಜನ ಜಾಗೃತಿ ಸಮಾವೇಶ ಏರ್ಪಡಿಸುವುದಾಗಿ ಪ್ರಕಟಿಸಿತ್ತು.
ಈ ಎರಡೂ ಕಾರ್ಯಕ್ರಮಗಳನ್ನು ಜಿಲ್ಲೆಯ ಹಿತದೃಷ್ಟಿಯಿಂದ ನಿಷೇಧಿಸಬೇಕು, ತಪ್ಪಿದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾಗಲಿದೆ. ಇದರಿಂದ ವ್ಯಾಪಾರ ವಾಣಿಜ್ಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಧಕ್ಕೆಯಾಗಲಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇದೀಗ ನಿಷೇಧಾಜ್ಞೆ ಜಾರಿಗೊಳಿಸಿದೆ.
ಕೊಡಗು ಜಿಲ್ಲೆಯಾದ್ಯಂತ ಆಗಸ್ಟ್ 24 ರ ಬೆಳಗ್ಗೆ 6 ಗಂಟೆಯಿಂದ ಆಗಸ್ಟ್ 27 ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ಸತೀಶ್ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಸಮಯದಲ್ಲಿ ವ್ಯಕ್ತಿಗಳು ಗುಂಪುಗೂಡುವುದು, ಮೆರವಣಿಗೆ, ಪ್ರತಿಭಟನೆ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಮೂಲಕ ಆ.26ರಂದು ಕಾಂಗ್ರೆಸ್ ಕರೆ ನೀಡಿದ್ದ ‘ಮಡಿಕೇರಿ ಚಲೋ’ ಹಾಗು ಬಿಜೆಪಿ ಆಯೋಜಿಸಿದ್ದ ‘ಜನಜಾಗೃತಿ ಸಮಾವೇಶ’ಗಳಿಗೆ ಅನುಮತಿ ನಿರಾಕರಿಸಲಾಗಿದೆ.
ಗುಪ್ತದಳದ ವರದಿ ಆಧರಿಸಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ.