ನವದೆಹಲಿ/ಬೆಂಗಳೂರು, ಅ.25- ಇಂದು ಸಂಜೆಯ ಆಗಸದಲ್ಲಿ ಸಂಭವಿಸಿದ ಪಾರ್ಶ್ವ ಸೂರ್ಯಗ್ರಹಣ ಖಗೋಳ ಕೌತುಕವನ್ನು ದೇಶದ ಜನ ಕಣ್ತುಂಬಿಕೊಂಡು ಸಂಭ್ರಮಿಸಿದರು.
ದೇಶದಲ್ಲಿ ಮೊದಲಿಗೆ ಅಮೃತಸರದಲ್ಲಿ ಗ್ರಹಣ ಗೋಚರವಾಗಿದ್ದು, ಸಂಜೆ 4 ಗಂಟೆ 19 ನಿಮಿಷಕ್ಕೆ ಗ್ರಹಣ ಗೋಚರಿಸಿದೆ. ನಂತರ, ಸಂಜೆ 4 ಗಂಟೆ 20 ನಿಮಿಷಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೂರ್ಯಗ್ರಹಣ ಗೋಚರವಾಗಿದೆ.
ಅದೇ ರೀತಿ, ಹರಿದ್ವಾರ, ಜಮ್ಮು, ಶ್ರೀನಗರ, ನೋಯ್ಡಾ, ಹೃಷಿಕೇಶ್, ಭೂಪಾಲ್, ಮುಂಬೈ, ಕೊಲ್ಕತ್ತಾ, ಅಹಮದಾಬಾದ್, ಲಕ್ನೋ, ಜೈಪುರ್ ಪಾಟ್ನಾ ಸೇರಿದಂತೆ ಬಹುತೇಕ ಕಡೆಗಳಲ್ಲಿಯೂ ಸೂರ್ಯಗ್ರಹಣ ಗೋಚರವಾಗಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿತು. ಈ ಬಾರಿ ಬಹುತೇಕರು ಸೌರ ಕನ್ನಡಕಗಳನ್ನು ಬಳಸಿ, ಮನೆಗಳಲ್ಲೇ ಗ್ರಹಣ ವೀಕ್ಷಿಸಿದರು.
ಗ್ರಹಣದ ಕಾರಣ ಜನ ಮನೆಯಿಂದ ಹೊರ ಬರಲಿಲ್ಲ. ಕೆಲವೆಡೆ ಹೋಟೆಲ್‍ಗಳು ತೆರೆದಿದ್ದರೂ ಭಣಗುಡುತ್ತಿದ್ದವು. ಇನ್ನೂ, ಸೂರ್ಯ ಗ್ರಹಣ ವೀಕ್ಷಿಸಲು ಪ್ರವಾಸಿಗರು ನಂದಿ ಬೆಟ್ಟಕ್ಕೆ ದೌಡಾಯಿಸಿದ್ದರು. ಸಾವಿರಾರು ಸಂಖ್ಯೆಯ ಪ್ರವಾಸಿಗರು ನಂದಿ ಬೆಟ್ಟದ ಮೇಲೆ ಜಮಾಯಿಸಿದ್ದ ದೃಶ್ಯ ಕಂಡಿತು.
ಆನ್‍ಲೈನ್‍ನಲ್ಲಿ ವೀಕ್ಷಣೆಗೆ ವ್ಯವಸ್ಥೆ: ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಕೆಲವೇ ಮಂದಿಗೆ ಮಾತ್ರ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಸಿಲೊಸ್ಟ್ಯಾಟ್ ಉಪಕರಣದ ಮೂಲಕ ಗ್ರಹಣ ಸೆರೆಹಿಡಿದು, ತಾರಾಲಯದ ವೆಬ್‍ಸೈಟ್ ಮೂಲಕ ಫೇಸ್‍ಬುಕ್, ಟ್ವಿಟರ್ ಹಾಗೂ ಯೂಟ್ಯೂಬ್‍ನಲ್ಲಿ ನೇರಪ್ರಸಾರ ಮಾಡಲಾಯಿತು. 15 ಸಾವಿರಕ್ಕೂ ಹೆಚ್ಚು ಮಂದಿ ನೇರಪ್ರಸಾರ ವೀಕ್ಷಿಸಿದರು.
ಮತ್ತೊಂದೆಡೆ, ಮೂಢ ನಂಬಿಕೆ ವಿರೋಧಿ ಒಕ್ಕೂಟದ ಸದಸ್ಯರು ನಗರದ ಪುರಭವನ ಮುಂಭಾಗದಲ್ಲಿ ಗ್ರಹಣದ ವೇಳೆ ಆಹಾರ ಸೇವಿಸಿದರು. ಜತೆಗೆ ಮೂಢನಂಬಿಕೆ ವಿರೋಧಿ ಗೀತೆಗಳನ್ನು ಹಾಡಿದರು.