ಬೆಂಗಳೂರು, ಅ.31- ಪೊಲೀಸ್ ಅಧಿಕಾರಿಗಳ ವರ್ಗಾವಣೆ ಕುರಿತಂತೆ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿಕೆಯಿಂದ ಮುಜುಗರಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಇದೀಗ ಸಚಿವರ ಹೇಳಿಕೆಯ ಬಗ್ಗೆ ಉನ್ನತ ತನಿಖೆಗೆ ಆದೇಶಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಈ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಸಚಿವ ಎಂ.ಟಿ.ಬಿ.ನಾಗರಾಜ್ ಇನ್ಸ್ ಪೆಕ್ಟರ್ ನಂದೀಶ್ ಆತ್ಮಹತ್ಯೆಯ ನಂತರ ನೀಡಿದ ಹೇಳಿಕೆ ಬಗ್ಗೆ ಸ್ವತಃ ನಾನೇ ತನಿಖೆ ನಡೆಸಿ ವರದಿ ನೀಡಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ಹೇಳಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕತೆ ಇಲ್ಲ, ಈ ಹಿಂದೆ ಕೆಲವು ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ವಹಿಸಿದಾಗ ಏನೆಲ್ಲ ಆಗಿದೆ ಎಂಬುದು ಎಲ್ಲರಿಗೂ ಗೊತ್ತು. ಅರ್ಕಾವತಿ ಲೇಔಟ್‍ನಲ್ಲಿ ನೂರಾರು ಎಕರೆ ಡಿನೋಟಿಫಿಕೇಷನ್ ನಡೆಸಿದ ರೀಡೊ ತನಿಖೆ ಏನಾಯಿತು ಎಂಬುದು ರಾಜ್ಯದ ಜನತೆಗೆ ಗೊತ್ತು ಎಂದು ತಿರುಗೇಟು ನೀಡಿದರು.
ಪ್ರಕರಣ ಕುರಿತು ಬೇಗ ಸತ್ಯಾಂಶ ಹೊರಬರಲಿ ಎಂಬ ಕಾರಣಕ್ಕಾಗಿಯೇ ನಾವು ಉನ್ನತಮಟ್ಟದ ತನಿಖೆಗೆ ಆದೇಶಿಸಿದ್ದೇವೆ. ಸತ್ಯಾಂಶ ಹೊರಬರಲಿ ಅಲ್ಲಿಯವರೆಗೂ ಕಾಂಗ್ರೆಸ್‍ನವರು ಯಾರಿಗೂ ಪ್ರಮಾಣ ಪತ್ರ ಕೊಡುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.
Previous Articleಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
Next Article ಸುಧಾ ಮೂರ್ತಿ ಏನು ಹೇಳಿದ್ದಾರೆ…ಕೇಳಿ!