ಬೆಂಗಳೂರು,ನ.19- ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದ ಅಕ್ರಮದ ಸಂಬಂಧ ‘ಚಿಲುಮೆ’ ಮುಖ್ಯಸ್ಥ ರವಿಕುಮಾರ್ ಪತ್ನಿ, ಕೃಷ್ಣೇಗೌಡ ಪತ್ನಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಚಿಲುಮೆ ಸಂಸ್ಥೆ ನಿರ್ದೇಶಕಿ ಆಗಿರುವ ರವಿಕುಮಾರ್ ಪತ್ನಿ ಐಶ್ವರ್ಯ ಹಾಗೂ ಟಿ.ಬೇಗೂರು ತೋಟದ ಮನೆಗೆ ದಾಖಲಾತಿ ಸಾಗಿಸಿದ್ದ ಕೃಷ್ಣೇಗೌಡರ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಹಿತಿ ಆಧರಿಸಿ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ್ದ ಹಲಸೂರು ಗೇಟ್ ಪೊಲೀಸರು ನಿನ್ನೆ ನಾಲ್ವರನ್ನು ವಶಕ್ಕೆ ಪಡೆದಿದ್ದರು. ಇಂದು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರುಪಡಿಸಲಿದ್ದಾರೆ. ನಿನ್ನೆ ಚಿಲುಮೆ ಕಚೇರಿ ಮೇಲೆ ಹಲಸೂರು ಗೇಟ್ ಪೊಲೀಸರು ದಾಳಿ ನಡೆಸಿದ್ದರು.
ದಾಳಿ ಹೋಗುವ ಮೊದಲೇ ಸಾಕಷ್ಟು ಕಂಪ್ಯೂಟರ್ ಹಾಗು ಲ್ಯಾಪ್‌ಟಾಪ್ ನಾಪತ್ತೆಯಾಗಿದೆ. ಒಂದೇ ಒಂದು ಲ್ಯಾಪ್ ಟಾಪ್, ಕಂಪ್ಯೂಟರ್ ಇಲ್ಲದಂತೆ ಚಿಲುಮೆ ಸಿಬ್ಬಂದಿ ಮಾಡಿದ್ದಾರೆ. ಸದ್ಯ ಪೊಲೀಸರು ಕಚೇರಿ ಸಿಸಿಟಿವಿ, ಡಿವಿಆರ್ ವಶಕ್ಕೆ ಪಡೆದಿದ್ದಾರೆ. ಪೊಲೀಸರು ದಾಳಿ ಮಾಡುವ ತನಕವೂ ಡಿವಿಆರ್ ರೆಕಾರ್ಡ್ ನಲ್ಲಿಯೇ ಇತ್ತು. ಹೀಗಾಗಿ ಡಿವಿಆರ್ ವಶಕ್ಕೆ ಪಡೆಯಲಾಗಿದೆ.
ಡಿವಿಆರ್ ಮೂಲಕ ಯಾರು ಯಾರು ಬರ್ತಿದ್ದಾರೆ, ಹೋಗುತ್ತಿದ್ದಾರೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಕಚೇರಿಯಲ್ಲಿ ಲ್ಯಾಪ್ ನಲ್ಲಿ ಕೆಲಸ ಮಾಡಿರುವುದಕ್ಕೆ ಸಾಕ್ಷಿ ಇದೆ. ಆದರೆ ಲ್ಯಾಪ್‌ಟಾಪ್ ಪತ್ತೆಯಾಗಿಲ್ಲ.
ಕಚೇರಿಯಲ್ಲಿ ಬಿಲ್ಗಳು, ಸುಮಾರು ಐವತ್ತಕ್ಕೂ ಹೆಚ್ಚು ಐಡಿ ಕಾರ್ಡ್ಗಳು ಲಭ್ಯವಾಗಿವೆ. ಇದೇ ಐಡಿ ಕಾರ್ಡ್ ಗಳನ್ನು ಬಳಸಿ ಸಾಕಷ್ಟು ಪ್ರಮಾಣದಲ್ಲಿ ಮತದಾರರ ಮಾಹಿತಿ ಸಂಗ್ರಹಕ್ಕೆ ಹೋಗಿದ್ದಾರೆ.
ಕರಾರು ಪತ್ರ ಪತ್ತೆ:
ಚಿಲುಮೆ ಸಂಸ್ಥೆ ಜೊತೆ ಪ್ರಭಾವಿ ರಾಜಕಾರಣಿಗಳ ಕರಾರು ಪತ್ರ ಪತ್ತೆಯಾಗಿದ್ದು, ಇಬ್ಬರು ರಾಜಕಾರಣಿಗಳು ಚುನಾವಣಾ ಸಮೀಕ್ಷೆ ಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮತ್ತೊಬ್ಬ ಪ್ರಭಾವಿ ರಾಜಕಾರಣಿಯ ಲೆಟರ್ ಹೆಡ್‍ಗಳು ಕೂಡ ಪತ್ತೆಯಾಗಿದೆ.
11ಕ್ಕೂ ಹೆಚ್ಚು ರಾಜಕಾರಣಿಗಳು, ಐಎಎಸ್, ಕೆಎಎಸ್ ಅಧಿಕಾರಿಗಳ ವಿಸಿಟಿಂಗ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. 7ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಡೆಸಿದ ಕೆಲವು ಕ್ಷೇತ್ರಗಳ ಸಮೀಕ್ಷೆಗಳ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದ್ದು ಪ್ರಮುಖ ಸಂಸ್ಥೆಯ ಲೆಟರ್‍ಹೆಡ್‍ಗಳು ಕೂಡ ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅನಧಿಕೃತ ಬಿಲ್ಡಿಂಗ್:
ಚಿಲುಮೆ ಸಂಸ್ಥೆಯ ಮೇಲಿನ ದಾಳಿಯಲ್ಲಿ ಅಧಿಕೃತ ಕಚೇರಿ ಹೊಂದಿದ್ದರೂ ಅನಧಿಕೃತವಾಗಿ ಬಿಲ್ಡಿಂಗ್ ಒಂದರಲ್ಲಿ ವ್ಯವಹಾರ ನಡೆಸುತ್ತಿರುವುದು ಬಯಲಾಗಿದೆ. ಈ ಕಟ್ಟಡದಲ್ಲಿನ ದಾಳಿ ವೇಳೆ ಪೊಲೀಸರಿಗೆ ಭರ್ಜರಿ ದಾಖಲೆ ಸಿಕ್ಕಿದೆ. ನಾಲ್ಕು ಬ್ಯಾಗ್ ಗಳು, ಒಂದು ಚೀಲದಲ್ಲಿ ಪೊಲೀಸರು ಚೆಕ್ ಗಳು, ಬ್ರೌಷರ್ ಗಳು, ಲೆಟರ್ ಹೆಡ್ ಗಳು, ಸ್ಕಾಲರ್ ಶಿಪ್ ದಾಖಲಾತಿಗಳನ್ನು ಕೊಂಡೊಯ್ದಿದ್ದಾರೆ.
ಚೆಕ್ ಗಳು ಲೆಟರ್ ಹೆಡ್ ಗಳು ಚಿಲುಮೆ ಸಂಸ್ಥೆಯದ್ದಲ್ಲ. ಪ್ರಭಾವಿ ರಾಜಕಾರಣಿಗಳಿಗೆ ಸೇರಿದ ಚೆಕ್, ಲೆಟರ್ ಹೆಡ್ ಬ್ರೌಷರ್ ಪತ್ತೆಯಾಗಿದೆ. ಆ ಪ್ರಭಾವಿ ರಾಜಕಾರಣಿಗೂ ಚಿಲುಮೆಗೂ ಇರುವ ಸಂಬಂಧವೇನು..?, ಚಿಲುಮೆ ಹೆಸರಲ್ಲಿ ಆ ಕಟ್ಟಡದಲ್ಲಿ ರಾಜಕಾರಣಿ ಮಾಡ್ತಿದ್ದ ವ್ಯವಹಾರವಾದರೂ ಏನು ಎನ್ನುವುದರ ಕುರಿತು ಎಲ್ಲ ದಾಖಲಾತಿಗಳನ್ನು ಹಲಸೂರು ಗೇಟ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಹೆಸರೇ ನಾಪತ್ತೆ:
ಪಟ್ಟಿ ಪರಿಷ್ಕರಣೆಯಲ್ಲಿ ಬದುಕಿದ್ದವರ ಹೆಸರೇ ನಾಪತ್ತೆಯಾಗಿ ಮೃತಪಟ್ಟವರ ಹೆಸರು ರಾರಾಜಿಸುತ್ತಿದೆ. ಈ ನಡುವೆ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಸೇರಿದ ರೇಣುಕಾಪ್ರಸಾದ್, ಧರ್ಮೇಶ್, ಸುಧಾಕರ್ ಮತ್ತು ರಕ್ಷಿತ್ ರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಈ ನಡುವೆ ಚಿಲುಮೆ ಸಂಸ್ಥೆಗೆ ಐಡಿ ಕಾರ್ಡ್ ನೀಡಿದ್ದ ಮಹದೇವಪುರ ವಲಯದ ಆರ್ ಒ ಚಂದ್ರಶೇಖರ್ ರನ್ನು ಸಸ್ಪೆಂಡ್ ಮಾಡಲಾಗಿದ್ದು ತನಿಖೆಯನ್ನು ತೀವ್ರಗೊಳಿಸಲಾಗಿದೆ.
ಆಧಾರ್ ಲಿಂಕ್ ಹೊಣೆ:
ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮದ ಸಂಬಂಧ ಬಿಬಿಎಂಪಿಯು ಚುನಾವಣಾ ಆಯೋಗಕ್ಕೆ ವರದಿ ನೀಡಿದೆ.ಅದರಲ್ಲಿ ಚಿಲುಮೆ ಸಂಸ್ಥೆಗೆ ವೋಟರ್ ಐಡಿ, ಆಧಾರ್ ಲಿಂಕ್ ಮಾಡುವ ಜವಾಬ್ದಾರಿ ನೀಡಲಾಗಿತ್ತು. ಉಚಿತವಾಗಿ ಜೋಡಣೆ ಮಾಡುವುದಾಗಿ ಚಿಲುಮೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಈ ಜವಾಬ್ದಾರಿಯನ್ನು ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಬಿಬಿಎಂಪಿ ಚುನಾವಣೆ, ವಿಧಾನಸಭೆ ಚುನಾವಣೆಗೆ ಮತದಾರರ ಮಾಹಿತಿ ಸೇಲ್ ಮಾಡಲು ಚಿಲುಮೆ ಸಂಸ್ಥೆ ಸಜ್ಜಾಗಿತ್ತು. ಕಳೆದ ಲೋಕಸಭಾ ಚುನಾವಣೆ ಹಾಗೂ ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಚಿಲುಮೆ ಸಂಸ್ಥೆ ಮತದಾರರ ಸಂಪೂರ್ಣ ಮಾಹಿತಿ ಸಂಗ್ರಹಿಸಿತ್ತು.
ಉದ್ಯೋಗ, ಜಾತಿ:
ಬೆಂಗಳೂರಿನ 90 ಲಕ್ಷ ಮತದಾರರ ಪೈಕಿ 60 ಲಕ್ಷ ಮತದಾರರ ಸಂಪೂರ್ಣ ಮಾಹಿತಿಯನ್ನು ಚಿಲುಮೆ ಸಂಸ್ಥೆ ಪಡೆದಿದ್ದು ನಗರದ 28 ಮತ ಕ್ಷೇತ್ರಗಳ ಬೂತ್ ಹಂತದ ಮತದಾರರ ಸಂಪೂರ್ಣ ವಿವರ ಚಿಲುಮೆ ಹೊಂದಿದೆ. ಮತದಾರರ ಹೆಸರು, ಮೊಬೈಲ್ ನಂಬರ್, ಉದ್ಯೋಗ, ಜಾತಿ, ಕಳೆದ ಬಾರಿ ಯಾರಿಗೆ ವೋಟ್ ಮಾಡಿದ್ದರು, ಯಾವ ಬೂತ್ನಲ್ಲಿ ಯಾವ ಜಾತಿಯ ಎಷ್ಟು ಮತದಾರರು ಇದ್ದಾರೆ ಎಂಬ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ.
ಚಿಲುಮೆ ಸಂಸ್ಥೆಯ ಸಿಬ್ಬಂದಿ ಬಿಎಲ್ ಒ ಎಂದು ಐಡಿ ಕಾರ್ಡ್ ಬಳಕೆ ಮಾಡುತ್ತಿರುವುದು ಹಾಗೂ ಮತದಾರರ ಮಾಹಿತಿ ಸಂಗ್ರಹ ಮಾಡುತ್ತಿರುವ ಬಗ್ಗೆ ಬಿಬಿಎಂಪಿಗೆ ಮೊದಲೇ ಗೊತ್ತಿತ್ತು. ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಸಮನ್ವಯ ಎಂಬ ಸಂಸ್ಥೆ ಈ ಬಗ್ಗೆ ಬಿಬಿಎಂಪಿಗೆ ದೂರು ನೀಡಿತ್ತು. ದೂರಿನ ಆಧಾರದ ಮೇಲೆ ನವೆಂಬರ್4 ನೇ ತಾರೀಖಿನಂದೇ ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಪತ್ರ ರದ್ದು ಮಾಡಲಾಗಿದೆ. ಆದರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ನವೆಂಬರ್15 ರಂದು. ಕಾಡುಗೋಡಿ ಪೊಲೀಸ್ ಠಾಣೆ, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ನವೆಂಬರ್
15 ರಂದು ದೂರು ದಾಖಲಾಗಿದೆ.
ದೂರು ವಿಳಂಬ ಸಂಶಯ:
ಬಿಬಿಎಂಪಿ ನವೆಂಬರ್ 4 ರಂದೇ ಏಕೆ ದೂರು ದಾಖಲು ಮಾಡಲಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಐಡಿ ಕಾರ್ಡ್ ನೀಡಿದ ಆರ್ಒ ವಿರುದ್ಧ ಅಂದೇ ಯಾಕೆ ಬಿಬಿಎಂಪಿ ಕ್ರಮ ತೆಗೆದುಕೊಳ್ಳಲಿಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಏಕೆ ಮಾಹಿತಿ ನೀಡಲಿಲ್ಲ ಎಂಬ ಪ್ರಶ್ನೆ ಎದ್ದಿದೆ.
ಮತದಾರರ ಮಾಹಿತಿ, ಆಧಾರ್ ಲಿಂಕ್ ಮಾಡುವ ಹೊಣೆಯನ್ನು ಬಿಬಿಎಂಪಿ ಖಾಸಗಿ ಸಂಸ್ಥೆಯಾಗಿರುವ ಚಿಲುಮೆ ಸಂಸ್ಥೆಗೆ ನೀಡಿದೆ. ಸರ್ಕಾರಿ ನೌಕರರು, ಅಥವಾ ಸರ್ಕಾರದ ಇಲಾಖೆಯಿಂದ ಆಧಾರ್ ಲಿಂಕ್ ಮಾಡಿಸದೆ ದೇಶದ ಗೌಪ್ಯ ಮಾಹಿತಿ ಸಂಗ್ರಹಣೆಗೆ ಖಾಸಗಿ ಸಂಸ್ಥೆಗೆ ನೀಡಿದ್ಯಾಕೆ ಎಂಬ ಅನುಮಾನ ವ್ಯಕ್ತವಾಗಿದೆ.
ಬ್ಯಾಂಕ್ ಅಕೌಂಟ್, ಮೊಬೈಲ್ ಸಿಮ್ ಕಾರ್ಡ್ ಸೇರಿದಂತೆ ಎಲ್ಲದಕ್ಕೂ ಆಧಾರ್ ಬಳಕೆ ಮಾಡಲಾಗಿದೆ. ಇಂತಹ ಗೌಪ್ಯತೆವುಳ್ಳ ಮಾಹಿತಿ ಸಂಗ್ರಹಣೆ ಚಿಲುಮೆ ಸಂಸ್ಥೆಗೆ ನೀಡಿದ್ಯಾಕೆ ಎಂಬ ಕೂಗು ಕೇಳಿ ಬರುತ್ತಿದೆ.
ಮತದಾರರ ಹೆಸರು ಡಿಲೀಟ್:
ಇನ್ನು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಟ್ಟು 33,009 ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಆರ್.ಆರ್.ನಗರ ಕ್ಷೇತ್ರದಲ್ಲಿರುವ ಸ್ಲಂ ನಿವಾಸಿಗಳು, ಮುಸ್ಲಿಮರು, ದಲಿತರ ಕಾಲೋನಿಯ ಮತದಾರರ ಹೆಸರು ಡಿಲೀಟ್ ಆಗಿರುವ ಬಗ್ಗೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ.
ಅಲ್ಲದೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿಯೂ ಸಾವಿರಾರು ಮತದಾರರ ಹೆಸರು ಡಿಲಿಟ್ ಮಾಡಲಾಗಿದೆ. ಹೆಬ್ಬಾಳದ ವಾರ್ಡ್ ನಂ 33 ವ್ಯಾಪ್ತಿಯಲ್ಲಿರುವ ಮತದಾರರ ಹೆಸರು ಡಿಲಿಟ್ ಮಾಡಲಾಗಿದ್ದು ಅದರಲ್ಲಿ ಹೆಚ್ಚಾಗಿ ಮುಸ್ಲಿಂ ಮತದಾರರೇ ಇದ್ದಾರೆ. ಬೂತ್ ನಂಬರ್ 232 ಒಂದರಲ್ಲಿಯೇ 65 ಮತದಾರರು ಡಿಲಿಟ್ ಆಗಿದ್ದಾರೆ.
Previous Articleಮಗು ಕೆರೆಗೆ ನೂಕಿ ಪರಾರಿಯಾಗಿದ್ದ ಟೆಕ್ಕಿ
Next Article ಸಿದ್ದರಾಮಯ್ಯ ಯಾಕೆ ಹೀಗೆ?