ಬೆಂಗಳೂರು – ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸುವ ದೃಷ್ಟಿಯಿಂದ ಸಿಸಿಬಿ ಪೊಲೀಸರು ರೌಡಿ ಶೀಟರ್ ಗಳು, ಅಪರಾಧದ ಹಿನ್ನೆಲೆಯ ವ್ಯಕ್ತಿಗಳ ಚಲನ ವಲನಗಳ ಮೇಲೆ ನಿಗಾವಹಿಸಿ ಕಾಲದಿಂದ ಕಾಲಕ್ಕೆ ಅವರ ಮನೆಗಳ ಮೇಲೆ ದಿಡೀರ್ ದಾಳಿ ನಡೆಸಿ ಎಚ್ಚರಿಕೆ ನೀಡುವುದು ಕ್ರಮ ಕೈಗೊಳ್ಳುವುದು ವಾಡಿಕೆ.
ಮೊನ್ನೆ ಇಂತಹ ಚಟುವಟಿಕೆ ನಡೆದಾಗ ರೌಡಿ ಶೀಟರ್ ಸೈಲೆಂಟ್ ಸುನಿಲ್ ನಾಪತ್ತೆ ಎಂಬ ವರದಿಗಳು ಬಂದಿದ್ದವು.ಅವರ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಬರಿಗೈಲಿ ಹಿಂತಿರುಗಿದ್ದರು. ಇದಾದ ಒಂದೇ ವಾರದಲ್ಲಿ ಸಿಸಿಬಿ ಕೇಂದ್ರ ಕಚೇರಿಯ ಅನತಿ ದೂರದಲ್ಲಿ ರಕ್ತದಾನ ಶಿಬಿರ ನಡೆಯತ್ತದೆ ಅದನ್ನು ಆಯೋಜಿಸಿದ ವ್ಯಕ್ತಿ ಸಿಸಿಬಿ ದಾಖಲೆಯಲ್ಲಿ ನಾಪತ್ತೆ.
ಶಿಬಿರ ಆಯೋಜಿಸಿದ ಸೈಲೆಂಟ್ ಸುನಿಲ್ ಸಂಸದರಾದ ಪಿ.ಸಿ. ಮೋಹನ್, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಉದಯ್ ಗರುಡಾಚಾರ್ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಾರೆ ಪೊಲೀಸರು ಶಾಸಕ-ಸಂದರಿದ್ದ ಕಾರ್ಯಕ್ರಮಕ್ಕೆ ಭದ್ರತೆ ನೀಡುತ್ತಾರೆ ಅದು ಅವರ ಕರ್ತವ್ಯ ಅಲ್ಲದೆ ಇವರು ಆಡಳಿತ ಪಕ್ಕಕ್ಕೆ ಸೇರಿದ ಕಾರಣ ಮತ್ತಷ್ಟು ಜಾಗ್ರತೆ ವಹಿಸಿದ್ದಾರೆ.
ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದ
ನಂತರ ಶಾಸಕರ ಜೊತೆ ಅವರದೇ ಕಾರಿನಲ್ಲಿ ಸುನಿಲ್ ಹೋಗುತ್ತಾರೆ. ರೌಡಿ ಪಟ್ಟಿಯಲ್ಲಿ ಹೆಸರಿದ್ದು, ಪೊಲೀಸ್ ದಾಖಲೆಗಳಲ್ಲಿ ನಾಪತ್ತೆಯಾದ ವ್ಯಕ್ತಿ ಆಡಳಿತ ಪಕ್ಚದ ಚುನಾಯಿತ ಸದಸ್ಯರ ಬೆಂಗಾವಲಿನಲ್ಲಿ ರಾಜಾರೋಷವಾಗಿ ಬಂದು ಹೋಗುತ್ತಾರೆಂದರೆ ಪೊಲೀಸರು ಏನು ಮಾಡಲು ಸಾದ್ಯ.
ಇಷ್ಟಾಗಿಯೂ ಇಲ್ಲಿರುವ ಪ್ರಶ್ನೆ ಪೊಲೀಸರಿಗೆ ಸಿಗದ ವ್ಯಕ್ತಿ ಶಾಸಕ- ಸಂಸದರಿಗೆ ಸಿಕ್ಕಿದ್ದು ಹೇಗೆ..?
ಸಿಸಿಬಿ ಕೇಂದ್ರ ಕಚೇರಿ ಪಕ್ಕದಲ್ಲೇ ರಕ್ತದಾನ ಶಿಬಿರ ಆಯೋಜಿಸಿದರೂ ಪೊಲೀಸರಿಗೆ ಗೊತ್ತಾಗಲಿಲ್ಲವೆ..?
ಇಂತಹ ಶಿಬಿರಗಳಿಗೆ ಪೊಲೀಸ್ ಅನುಮತಿ ಪಡೆಯಬೇಕಲ್ಲವೆ..?
ಶಾಸಕ-ಸಂಸದರು ಪಾಲ್ಗೊಳ್ಳುವ ಕಾರ್ಯಕ್ರಮದ ಬಗ್ಗೆ ಪೊಲೀಸರಿಗೆ ಮಾಹಿತಿಯಿರುವುದಿಲ್ಲವೆ..?
ಸಿಸಿಬಿ ಪೊಲೀಸ್ ನ ಗುಪ್ತದಳ ಹಾಗೂ ಮಾಹಿತಿ ಸಂಗ್ರಹ ಪಡೆ ನಾಪತ್ತೆಯಾದ ರೌಡಿ ಶೀಟರ್ ಗಾಗಿ ಹುಡುಕಾಟ ನಡೆಸುವುದಿಲ್ಲವೆ..?
ಇನ್ನೂ ಶಾಸಕರು ಆತ ನನ್ನ ಸ್ನೇಹಿತ. ಆದರೆ ರೌಡಿ ಪಟ್ಟಿಯಲ್ಲಿರುವ ವ್ಯಕ್ತಿ ಎಂದು ಗೊತ್ತಿಲ್ಲ ಎಂದಿದ್ದಾರೆ
ತಮ್ಮ ಜೊತೆಗೆ ತನ್ನ ಕಾರಿನಲ್ಲಿ ಬರುವ ಸ್ನೇಹಿತ ಯಾರೆಂದು ಗೊತ್ತಿಲ್ಲದಷ್ಟು ಅಮಾಯಕರೆ ಈ ಶಾಸಕರು..? ಅಂದ ಹಾಗೆ ಈ ಶಾಸಕರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ದಕ್ಷ ಅಧಿಕಾರಿ ಎಂದು ಹೆಸರು ಪಡೆದವರ ಮಗ.
ಹಿಂದೊಮ್ಮೆ ಇದೇ ಸಿಸಿಬಿ ಪೊಲೀಸರು ನಡೆಸಿದ ರೌಡಿ ಪರೇಡ್ ವೇಳೆ ಹಾಜರಾಗಿದ್ದ ಈ ವ್ಯಕ್ತಿ ಅಂದಿನ ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರೊಂದಿಗೆ ನಡೆದುಕೊಂಡ ವರ್ತನೆ ಮಾಧ್ಯಮಗಳಲ್ಲಿ ವಿವರವಾಗಿ ವರದಿಯಾಗಿತ್ತು. ಇದು ಶಾಸಕ-ಸಂಸದರ ಗಮನಕ್ಕೆ ಬಂದಿರಲಿಲ್ಲವೇ..?
ಸಿಸಿಬಿ ಪೊಲೀಸರ ಕಾರ್ಯ ವೈಖರಿಗೆ ಇದು ಉತ್ತಮ ಉದಾಹರಣೆಯಲ್ಲವೆ..?