ಬೆಂಗಳೂರು,ಡಿ.1-ಸಿಸಿಬಿ ಪೊಲೀಸರ ಪಟ್ಟಿಯಲ್ಲಿ ನಾಪತ್ತೆಯಾದ ರೌಡಿ ಶೀಟರ್ ಸೈಲೆಂಟ್ ಸುನಿಲ್ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡ ಪ್ರಕರಣದಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾದ ಬಿಜೆಪಿ ಇದೀಗ ಈ ವಿಷಯದಲ್ಲಿ ಎಚ್ಚರಿಕೆಯ ನಡೆ ಆರಂಭಿಸಿದೆ.
ಸೈಲೆಂಟ್ ಸುನಿಲ್ ಅನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ.ಅವರೊಂದಿಗೆ ಕಾಣಿಸಿಕೊಂಡ ಸಂಸದರಿಂದ ವಿವರಣೆ ಕೇಳುವುದಾಗಿ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ ಬೆನ್ನಲ್ಲೇ ಅಪರಾಧದ ಹಿನ್ನೆಲೆಯುಳ್ಳವರಿಗೆ ಬಿಜೆಪಿಯಲ್ಲಿ ಜಾಗವಿಲ್ಲ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಯಾವುದೇ ಕಾರಣಕ್ಕೂ ಅಪರಾಧ ಹಿನ್ನಲೆಯುಳ್ಳ ರೌಡಿಗಳನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದೇ ಇಲ್ಲ. ಈ ನಿಲುವಿನಲ್ಲಿ ಬದಲಾವಣೆ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರೌಡಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಾದ ಅಗತ್ಯ ನಮಗಿಲ್ಲ. ಅಂಥವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ರಾಜಕಾರಣ ಮಾಡಬೇಕಾದ ಅಗತ್ಯವೂ ಇಲ್ಲ ಎಂದರು
ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್‍ಕುಮಾರ್ ಕಟೀಲ್ ಅವರೇ ಸ್ಪಷ್ಟಪಡಿಸಿರುವುದರಿಂದ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಮಗೆ ಇಂತಹ ವಿಷಯಗಳ ಬಗ್ಗೆ ಚರ್ಚಿಸಲು ಸಮಯವೂ ಇಲ್ಲ. ಬಿಜೆಪಿಗೆ ರೌಡಿಗಳ ಅಗತ್ಯ ಬೇಕಾಗಿಯೇ ಇಲ್ಲ ಎಂದು ಹೇಳಿದರು.
ಕುಸ್ತಿಗೆ ಬೇಕು.
ಈ ನಡುವೆ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಕುಸ್ತಿ ಮಾಡಲು ಇಂತಹ ಜನರು ಬೇಕಾಗಿದ್ದಾರೆ ಹೀಗಾಗಿ ಅಂತಹವರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿಗೆ ಯಾವಾಗ ಯಾವ ಸಿದ್ಧಾಂತ ಇತ್ತು? ಅವರು ಸಿದ್ಧಾಂತದ ಬಗ್ಗೆ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ. ಅವರು ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ಭಾವನೆಗೂ, ಬದುಕಿಗೂ ವ್ಯತ್ಯಾಸವಿದೆ. ಬದುಕಿನ ಮೇಲೆ ರಾಜಕಾರಣ ಮಾಡಿಲ್ಲ. ಜನರ ಹೊಟ್ಟೆ ತುಂಬಿಸಿ, ಅವರಿಗೆ ಉದ್ಯೋಗ ಕೊಟ್ಟು, ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಬೇಕು ಎಂಬುದು ಅವರಲ್ಲಿ ಇಲ್ಲ. ಅವರಿಗೇನಿದ್ದರೂ ಭಾವನೆಗಳ ವಿಚಾರದ ಮೇಲಷ್ಟೇ ಆಸಕ್ತಿ’ ಎಂದರು.