ಬೆಂಗಳೂರು,ಡಿ.10-ಪುರಾತನ ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳ ಅಪರೂಪದ ಪುಸ್ತಕಗಳು,ಹಸ್ತಪ್ರತಿಗಳನ್ನು ಸಂರಕ್ಷಿಸಿ ಸಂಶೋಧನೆ ನಡೆಸಿ ಉತ್ತೇಜನ ನೀಡಲು
ಇನ್ಫೋಸಿಸ್ ಪ್ರತಿಷ್ಠಾನ ಮುಂದಾಗಿದೆ.
ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಮತ್ತವರ ಪತ್ನಿ ಸುಧಾ ಮೂರ್ತಿ ಅವರ ಪ್ರತಿಷ್ಠಾನದ ಮೂರ್ತಿ ಟ್ರಸ್ಟ್ ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳ, ಪುಸ್ತಕಗಳು, ಹಸ್ತಪ್ರತಿಗಳನ್ನು ಸಂರಕ್ಷಿಸಿ ಸಂಶೋಧನೆ ನಡೆಸಿ ಉತ್ತೇಜನ ನೀಡಲು 7.50
ಕೋಟಿ ರೂ ಕೊಡುಗೆ ನೀಡಿದೆ. ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳ ಸಂಶೋಧನೆ ಅಭಿವೃದ್ಧಿಯಲ್ಲಿ ತೊಡಗಿರುವ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ಗೆ 7.50 ಕೋಟಿ ರೂಗಳ ಕೊಡುಗೆಯನ್ನು ಮೂರ್ತಿ ಟ್ರಸ್ಟ್ ನೀಡಿದೆ.
ಕೊಡುಗೆಯಲ್ಲಿ ಮೂರ್ತಿ ಸೆಂಟರ್ ಆಫ್ ಇಂಡಿಕ್ ಸ್ಟಡೀಸ್ ಹೆಸರಿನ 18 ಸಾವಿರ ಚದರ ಅಡಿ ವಿಸ್ತೀರ್ಣದ ಪಾರಂಪರಿಕ ಶೈಲಿಯ,ಇನ್ನೂರು ಆಸನಗಳ ತರಗತಿ ಸಾಮರ್ಥ್ಯ ಹೊಂದಿದ ಶೈಕ್ಷಣಿಕ ಮತ್ತು ಸಂಶೋಧನಾ ಕಟ್ಟಡ, ಸಭಾಂಗಣ ಹಾಗೂ ಪ್ರಾಚೀನ ಪುಸ್ತಕಗಳು, ಹಸ್ತಪ್ರತಿಗಳನ್ನು ಡಿಜಿಟಲೀಕರಣ ಮಾಡಲು ಆಡಿಯೊ- ವಿಶುವಲ್ ಸ್ಟುಡಿಯೊದ ನಿರ್ಮಾಣವನ್ನು ಕೂಡಾ ಒಳಗೊಂಡಿದೆ. ಸುಧಾ ಮೂರ್ತಿಯವರು ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಿ ದೇಶವು ಸಾಂಸ್ಕೃತಿಕ ಪರಂಪರೆಯ ಪ್ರಮುಖ ಆಧಾರಸ್ತಂಭವಾಗಿದೆ. ಇದು ಬೌದ್ಧಿಕ ಸಂಶೋಧನಾ ಪ್ರಬಂಧಗಳು ಮತ್ತು ಪುಸ್ತಕಗಳ ಸಮೃದ್ಧಿಗೆ ಕಾರಣವಾಗಿದೆ ಎಂದರು. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವ ಉದ್ದೇಶದಿಂದ ನಾವು ಕೊಡುಗೆ ನೀಡಿದ್ದೇವೆ ಎಂದು ಹೇಳಿದರು. ಭಂಡಾರ್ಕರ್ ನ ಅಧ್ಯಕ್ಷರಾದ ಭೂಪಾಲ್ ಪಟವರ್ಧನ್ ಮಾತನಾಡಿ ಸಂಸ್ಥೆಯು ಭಾರತೀಯ ತತ್ತ್ವಶಾಸ್ತ್ರದಿಂದ ಕಥಕ್‍ವರೆಗೆ ಮತ್ತು ಆಯುರ್ವೇದದಿಂದ ಖಗೋಳಶಾಸ್ತ್ರದವರೆಗೆ ವಿವಿಧ ವಿಷಯಗಳಲ್ಲಿ ಕೆಲಸ ಮಾಡುವ ಸುಮಾರು 40 ವಿದ್ವಾಂಸರನ್ನು ಹೊಂದಿದೆ. ಮುಂಬರುವ ಮೂರ್ತಿ ಸೆಂಟರ್ ಆಫ್ ಇಂಡಿಕ್ ಸ್ಟಡೀಸ್ 60 ಕ್ಕೂ ಹೆಚ್ಚು ವಿದ್ವಾಂಸರಿಗೆ ಅವಕಾಶ ಕಲ್ಪಿಸುತ್ತದೆ. ಅದೇ ಸಮಯದಲ್ಲಿ, ಸಂಸ್ಥೆಯು ಈಗ ಶಿಕ್ಷಣಕ್ಕೂ ಪ್ರವೇಶಿಸಿದೆ ಎಂದರು.
Previous Articleಮಾಜಿ ಸೈನಿಕರೊಬ್ಬರ ಬಳಿಯೇ ಲಂಚಕ್ಕೆ ಬೇಡಿಕೆಯಿಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Next Article ಪಂಜಾಬ್ ಪೊಲೀಸ್ ಠಾಣೆ ಮೇಲೆ ಪಾಕ್ ಗ್ರನೇಡ್ ದಾಳಿ