Source : NewsHamster
ಕಿಶೋರ್ ಕುಮಾರ್, ತಮ್ಮ ಅದ್ಭುತ ನಟನೆಯಿಂದ ಕನ್ನಡದಲ್ಲಷ್ಟೇ ಅಲ್ಲದೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿಯೂ ಸಹ ಜನಪ್ರಿಯರಾಗಿರುವ ಕರ್ನಾಟಕದ ಪ್ರತಿಭೆ. ವೀರಪ್ಪನ್ ಎಂದೊಡನೆ ಅಸಲಿ ವೀರಪ್ಪನ್ ಗಿಂತ ಕನ್ನಡದ ಅಟ್ಟಹಾಸ ಚಿತ್ರದಲ್ಲಿ ವೀರಪ್ಪನ್ ಪಾತ್ರವನ್ನು ನಿಭಾಯಿಸಿದ ಕಿಶೋರ್ ಕುಮಾರ್ ನೆನಪಾದರೂ ಅಚ್ಚರಿಯಿಲ್ಲ, ಹಾಗಿತ್ತು ಅವರ ನಟನೆಯ ಖದರ್. ಇತ್ತೀಚೆಗಷ್ಟೇ ಭಾರಿ ಯಶಸ್ಸು ಕಂಡ “ಕಾಂತಾರ” ಸಿನಿಮಾದಲ್ಲಿ, ಅರಣ್ಯಾಧಿಕಾರಿಯ ಪಾತ್ರವನ್ನು ಮನೋಜ್ಞವಾಗಿ ನಟಿಸಿದ ಇವರು ನಿರ್ದೇಶಕರ ಕಲ್ಪನೆಯ ಪಾತ್ರಕ್ಕೆ ಜೀವ ತುಂಬುವ ಭರವಸೆಯ ನಟರು. ಇನ್ನು, ಅವರ ನಟನೆಗಷ್ಟೇ ಅಲ್ಲದೆ, ಅವರ ವ್ಯಕ್ತಿತ್ವ, ನೇರ ನಡೆ ನುಡಿ, ವ್ಯವಸ್ಥೆಯ ವಿರುದ್ಧ ದನಿಯೆತ್ತುವ ಧೈರ್ಯವನ್ನೂ ಸಹ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ, ‘ಕಾಂತಾರ ಮತ್ತು ಧರ್ಮ‘ ಎಂಬ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ವಿಷಯದ ವಿರುದ್ಧವಾಗಿ ಕಟುವಾಗಿ ಪ್ರತಿಕ್ರಿಯಿಸಿದ ಕಿಶೋರ್ ಕುಮಾರ್’ರ ಪ್ರತಿಕ್ರಿಯೆ ನೆಟ್ಟಿಗರ ಬೆಂಬಲ ಮತ್ತು ಮೆಚ್ಚುಗೆಯನ್ನು ಪಡೆದಿತ್ತು. ಕೆಲವು ದಿನಗಳ ಹಿಂದೆ, ಇವರ ಟ್ವಿಟರ್ ಅಕೌಂಟ್ ಬ್ಲಾಕ್ ಆಗಿದೆ ಎಂಬ ಸಂದೇಶ ಹರಿದಾಡುತ್ತಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಕೌಂಟ್ ಬ್ಲಾಕ್ ಆದ ವಿಷಯದ ಬಗ್ಗೆ ಸಾಕಷ್ಟು ಆತಂಕ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದರು. “ನನ್ನ ಅಕೌಂಟ್ ಬ್ಲಾಕ್ ಆಗಿಲ್ಲ, ಬದಲಾಗಿ ಹ್ಯಾಕ್ ಆಗಿತ್ತು. ಟ್ವಿಟರ್ ಸಂಸ್ಥೆಯು ಈ ವಿಷಯದ ಬಗ್ಗೆ ತಕ್ಕ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ” ಎಂಬ ಸ್ಪಷ್ಟೀಕರಣ ನೀಡಿದ ಕಿಶೋರ್ ಕುಮಾರ್ ಅಭಿಮಾನಿಗಳ ಆತಂಕಕ್ಕೆ ತೆರೆ ಎಳೆದಿದ್ದಾರೆ.
ತೆರೆಯ ಮೇಲೆ ಅಬ್ಬರಿಸುವ ಈ ನಾಯಕನ ಜೀವನ ತೆರೆಯೆ ಹಿಂದೆ ಹೇಗಿದೆ ಗೊತ್ತಾ?
ಅವರ ಶಿಕ್ಷಣ
ಕರ್ನಾಟಕದ ತುಮಕೂರು ಜಿಲ್ಲೆಯ ಕುಣಿಗಲ್’ನ ಸೇಂಟ್ ತೆರೆಸಾ ಮತ್ತು ಶ್ರೀ ಸಿದ್ಧಾರ್ಥ ಹೈ ಸ್ಕೂಲ್ ನಲ್ಲಿ ಇವರು ತಮ್ಮ ಪ್ರಾಥಮಿಕ ಮತ್ತು ಹೈ ಸ್ಕೂಲ್ ಶಿಕ್ಷಣವನ್ನು ಪಡೆದರು. 1996 ರಲ್ಲಿ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೆಜಿನಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಬ್ಯಾಚುಲರ್ ಆಫ಼್ ಸೈನ್ಸ್ ಡಿಗ್ರಿ ಪಡೆದ ಇವರು, 2000 ರಲ್ಲಿ ಬೆಂಗಳೂರಿನ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಾಹಿತ್ಯ ವಿಭಾಗದಲ್ಲಿ ಮಾಸ್ಟರ್ ಡಿಗ್ರಿಯನ್ನೂ ಸಹ ಪಡೆದಿರುವರು.
ರೈತಾಪಿಯ ಹಿನ್ನೆಲೆ
ಕಿಶೋರ್ ಕುಮಾರ್ (Kishore Kumar) ಮೂಲತಃ ರೈತಾಪಿಯ ಕುಟುಂಬದವರು. ತಮ್ಮ ಪತ್ನಿ ವಿಶಾಲಾಕ್ಷಿ ಪದ್ಮನಾಭನ್ ಅವರೊಡನೆ “Buffallo Back Collective” ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಪ್ರಸ್ತುತ ವ್ಯವಸ್ಥೆಯಲ್ಲಿ, ರೈತರಿಗೆ ಸರಿಯಾದ ಮಾಹಿತಿ ಮತ್ತು ಬೆಂಬಲ ದೊರೆಯುತ್ತಿಲ್ಲ, ಈ ಕ್ಷೇತ್ರದಲ್ಲಿ ಮಾದರಿಯ ಬದಲಾವಣೆಯ ಅವಶ್ಯಕತೆಯಿದೆ ಎಂದು ಗಾಢವಾಗಿ ನಂಬಿದ ವಿಶಾಲಾಕ್ಷಿ ರೈತಾಪಿಯೆಡೆ ಒಲವು ತೋರಿದರು.
Buffallo Back Collective ಎಂಬುದು ವಿಶಾಲಾಕ್ಷಿಯವರ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಸಂಘ. ಸಾವಯಾವವಾಗಿ ಬೆಳೆದ ಉತ್ತಮ ಗುಣಮಟ್ಟದ ದವಸ, ಧಾನ್ಯ, ತರಕಾರಿಗಳನ್ನು ನೇರವಾಗಿ ಬೆಂಗಳೂರಿನ ಔಟ್ಲೆಟ್ ಗಳಲ್ಲಿ ಮಾರಲಾಗುವುದು. ಮಧ್ಯವರ್ತಿಯ ಅವಶ್ಯಕತೆಯನ್ನು ನಿರ್ಮೂಲನೆಗೊಳಿಸಿ, ರೈತರಿಗೇ ಹೆಚ್ಚಿನ ಲಾಭವನ್ನು ದೊರಕಿಸುವ ಉನ್ನತ ಆಶಯ Buffallo Back Collective ನದ್ದು.
ವೃತ್ತಿ ಜೀವನದ ಆರಂಭದ ದಿನಗಳು
ಕಿಶೋರ್ ಕುಮಾರ್ ಬೆಂಗಳೂರಿನ ಶಾರದಾ ಕಾಲೇಜಿನಲ್ಲಿ ಸಾಹಿತ್ಯ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಒಂದು ಸಂದರ್ಶನದಲ್ಲಿ ಅವರು ಹೇಳಿರುವ ಪ್ರಕಾರ, ಅವರು ಕಲಿಸುವ ರೀತಿ ಕಾಲೇಜಿನ ಇತರ ಉಪನ್ಯಾಸಕರಿಗೆ ಮತ್ತು ಮ್ಯಾನೇಜ್ಮೆಂಟ್ ವರ್ಗಕ್ಕೆ ಇಷ್ಟವಾಗುತ್ತಿರಲ್ಲಿಲ್ಲವಂತೆ. ಉಪನ್ಯಾಸಕ ವೃತ್ತಿಯಿಂದ ಹೊರಬಂದ ನಂತರ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ಼್ ಫ಼್ಯಾಷನ್ ಟೆಕ್ನಾಲಾಜಿ ಯ ಪ್ರೊಫ಼ೆಸರ್ ಆಗಿದ್ದ ವಿದ್ಯಾಸಾಗರ್ ರ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದರ ಮಧ್ಯೆ, ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ದಿನಪತ್ರಿಕೆಗಳಿಗೆ ಸೆಲ್ಸ್ಮ್ಯಾನ್ ಆಗಿ ಕೂಡ ಕೆಲಸ ಮಾಡಿದ್ದರು.
ನಟನೆಯ ವೃತ್ತಿಯ ಕೆಲವು ಮುಖ್ಯ ಮೈಲಿಗಲ್ಲುಗಳು
2004 ರಲ್ಲಿ ಕನ್ನಡದ ಕಂಠಿ ಚಿತ್ರದ “ಬೀರ”ನ ಪಾತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
2006 ರಲ್ಲಿ ಹ್ಯಾಪಿ ಎನ್ನುವ ಚಿತ್ರದಲ್ಲಿ ಎಸಿಪಿ ರತ್ನಂ ಪಾತ್ರದಲ್ಲಿ ನಟಿಸುವ ಮೂಲಕ ತೆಲುಗು ಭಾಷೆಯ ಚಿತ್ರರಂಗಕ್ಕೂ ಪರಿಚಿತರಾದರು.
2008 ರಲ್ಲಿ ಪೊಲ್ಲಾಧವನ್ ಎನ್ನುವ ತಮಿಳು ಚಿತ್ರದಲ್ಲಿ ಸೆಲ್ವಂ ಪಾತ್ರ ನಿರ್ವಹಿಸಿ ತಮಿಳು ಚಿತ್ರರಂಗವನ್ನು ಪ್ರವೇಶಿಸಿದರು.
2012 ರಲ್ಲಿ ತಿರುವಂಬಾಡಿ ತಂಬನ್ ಎನ್ನುವ ಮಲಯಾಳಂ ಚಿತ್ರದಲ್ಲಿ ಶಕ್ತಿವೇಲ್ ಎಂಬ ಪಾತ್ರವನ್ನು ಅಭಿನಯಿಸಿ ಮಲಯಾಳಂ ಚಿತ್ರರಂಗಕ್ಕೂ ಪ್ರವೇಶ ನೀಡಿದರು.
2013 ರಲ್ಲಿ ಕಾಡುಗಳ್ಳ ವೀರಪ್ಪನ್ ಜೀವನ ಆಧಾರಿತ ಕನ್ನಡದ ಅಟ್ಟಹಾಸ ಚಿತ್ರದಲ್ಲಿ ಅವರು ನಿಭಾಯಿಸಿದ ವೀರಪ್ಪನ್ ಪಾತ್ರ ಅವರಿಗೆ ಹೆಚ್ಚು ಜನಪ್ರಿಯತೆ ಮತ್ತು ಖ್ಯಾತಿಯನ್ನು ತಂದುಕೊಟ್ಟಿತು. ಅಲ್ಲದೆ, 2022 ರಲ್ಲಿ ಕನ್ನಡದ ಕಾಂತಾರ ಮತ್ತು ತಮಿಳಿನ ಪೊನ್ನಿಯಿನ್ ಸೆಲ್ವನ್ : I ಚಿತ್ರಗಳೂ ಸಹ ಇವರಿಗೆ ಹೆಚ್ಚಿನ ಪ್ರಖ್ಯಾತಿ ಮತ್ತು ಜನಾನುರಾಗವನ್ನು ತಂದುಕೊಟ್ಟಿವೆ.
ವೆಬ್ ಸೀರೀಸ್ ಪಯಣ
2019ರ ಏಪ್ರಿಲ್ ನಲ್ಲಿ ಜಿ೫ ನಲ್ಲಿ ಪ್ರಸಾರವಾಗುತ್ತಿದ್ದ ಹೈ ಪ್ರೀಸ್ಟೆಸ್ ಎನ್ನುವ ತೆಲುಗು ವೆಬ್ ಸೀರೀಸ್ ನಲ್ಲಿ ವಿಕ್ರಮ್ ಪಾತ್ರದ ಮೂಲಕ ಡಿಜಿಟಲ್ ದೃಶ್ಯ ಮಾಧ್ಯಮಕ್ಕೂ ತೆರೆದುಕೊಂಡರು. ಅದೇ ವರ್ಷದ ಸೆಪ್ಟೆಂಬರ್ ನಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಬಿತ್ತರಗೊಳ್ಳುತ್ತಿದ ದಿ ಫ಼್ಯಾಮಿಲಿ ಮ್ಯಾನ್ ಎನ್ನುವ ಹಿಂದಿ ವೆಬ್ ಸೀರೀಸ್ ನಲ್ಲಿ ಇಮ್ರಾನ್ ಪಾಶಾ ಪಾತ್ರಧಾರಿಯಾಗಿ ಕಾಣಿಸಿಕೊಂಡರು.
2020 ರಲ್ಲಿ ತೆಲುಗು ವೆಬ್ ಸೀರೀಸ್ ಅದ್ದಾಂ ನಲ್ಲಿ ರಾಮ್’ನ ಪಾತ್ರ ಮತ್ತು 2022 ರಲ್ಲಿ ಹಿಂದಿ ವೆಬ್ ಸೀರೀಸ್ ಶಿ ಯ ಎರಡನೇ ಸೀಸನ್ ನಲ್ಲಿ ನಾಯಕ್ ಎನ್ನುವ ಪಾತ್ರವನ್ನು ಕೂಡ ಅಭಿನಯಿಸಿದ್ದಾರೆ.
ಬಿಡುವಿನ ಸಮಯದಲ್ಲಿ ಅವರ ನೆಚ್ಚಿನ ಹವ್ಯಾಸ
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಬಳಿಯಿರುವ ಕರಿ ಕಾಡು ತೋಟ ಎಂಬಲ್ಲಿ ಕಿಶೋರ್ ಕುಮಾರ್ ಆಸ್ತಿಯನ್ನು ಹೊಂದಿದ್ದಾರೆ. ಅಲ್ಲಿ ಅವರು ತಮ್ಮ ಪತ್ನಿಯೊಡನೆ ಸಾವಯವ ಕೃಷಿಯನ್ನು ಅಭ್ಯಾಸ ಮಾಡುತ್ತಾರೆ.
“ಕೊವಿಡ್ ೧೯ ಲಾಕ್ ಡೌನ್ ಸಮಯದಲ್ಲಿ ನಾನು ಹೆಚ್ಚಿನ ಸಮಯವನ್ನು ಕೃಷಿಯಲ್ಲಿಯೇ ಕಳೆದೆ. ಹೆಸರು ಕಾಳು, ಭತ್ತ, ರಾಗಿ ಮತ್ತು ಇತರ ಧಾನ್ಯಗಳನ್ನು ಬೆಳೆದಿದ್ದೆವು” ಎಂದು ಒಂದು ಸಂದರ್ಶನದಲ್ಲಿ ಹೇಳಿಕೊಂಡಿರುವ ಕಿಶೋರ್ ಕುಮಾರ್, “ಒಂದು ವೇಳೆ ನಾನು ನಟನಾಗದಿದ್ದರೆ, ಕೃಷಿಕ ಅಥವಾ ಸಾಹಿತಿ ಆಗುತ್ತಿದ್ದೆ” ಎಂದು ಹೇಳುವ ಮೂಲಕ ಕೃಷಿ ಮತ್ತು ಸಾಹಿತ್ಯದೆಡೆಗೆ ಅವರಿಗಿರುವ ಒಲವನ್ನು ವ್ಯಕ್ತಪಡಿಸಿದ್ದಾರೆ.