ಬೆಂಗಳೂರು
ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಹೈ ಪ್ರೊಫೈಲ್ ಲೈಂಗಿಕ ಪ್ರಕರಣದ ಪ್ರಮುಖ ಆರೋಪಿ Santro Ravi ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ‘ಮಧುಮೇಹ ಸೇರಿದಂತೆ ಹಲವು ಕಾರಣಗಳಿಂದಾಗಿ ಆತನ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ರಾತ್ರಿಯಿಂದ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ತಕ್ಷಣವೇ ಆತನಿಗೆ ಪರಪ್ಪನ ಅಗ್ರಹಾರ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಇದರಿಂದ ಹೆಚ್ಚಿನ ಸುಧಾರಣೆಯಾಗದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಉನ್ನತ ಮೂಲಗಳ ಪ್ರಕಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ಸ್ಯಾಂಟ್ರೋ ರವಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ಯತ್ನ ಮಾಡಿದ್ದಾನೆ. ತಾನು ಹಾಕಿಕೊಂಡಿದ್ದ ಪ್ಯಾಂಟ್ ಬಿಚ್ಚಿ ಅದರಿಂದ ನೇಣು ಬಿಗಿದುಕೊಂಡಿದ್ದಾನೆ. ಅದನ್ನು ಗಮನಿಸಿದ ಇತರೆ ಜೈಲು ವಾಸಿಗಳು ಮತ್ತು ಭದ್ರತಾ ಸಿಬ್ಬಂದಿ ಆತನನ್ನು ರಕ್ಷಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ನೇಣು ಬಿಗಿದುಕೊಂಡ ಪರಿಣಾಮ ಆತನ ಉಸಿರಾಟದಲ್ಲಿ ವ್ಯತ್ಯಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
Congress – JDS ಮೈತ್ರಿ ಸರ್ಕಾರದ ಪತನದ ವೇಳೆ ಪ್ರಮುಖ ಪಾತ್ರ ವಹಿಸಿದ್ದ Santro Ravi, ನಂತರ ನೂತನ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದ. ಕೆಲವು ಮಂತ್ರಿಗಳು, ಹಿರಿಯ ಅಧಿಕಾರಿಗಳ ಜೊತೆ ಒಡನಾಟ ಹೊಂದಿದ್ದ ಆತ ಆಯಕಟ್ಟಿನ ಹುದ್ದೆಯ ಅಧಿಕಾರಿಗಳ ವರ್ಗಾವಣೆಯ ದಂಧೆ ನಡೆಸುತ್ತಿದ್ದ. ಸರ್ಕಾರದ ಅತಿಥಿ ಗೃಹ ‘ಕುಮಾರಕೃಪಾ’ದಲ್ಲಿ ಅನಧಿಕೃತ ಕೊಠಡಿ ಹೊಂದಿದ್ದ ಈತ ಅಲ್ಲಿಂದ ಹೈ ಪ್ರೊಫೈಲ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂಬ ಆರೋಪ ಎದುರಿಸುತ್ತಿದ್ದಾನೆ.
ಮೈಸೂರು ಮೂಲದ Santro Ravi ಮೇಲೆ ಎರಡನೇ ಪತ್ನಿ ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಹೊರಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ‘ಬೇರೆಯವರೊಂದಿಗೆ ದೇಹ ಸಂಪರ್ಕ ಬೆಳೆಸುವಂತೆ ರವಿ ಒತ್ತಾಯಿಸುತ್ತಿದ್ದಾನೆ’ ಎಂದು ಆರೋಪಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದವು. ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ರವಿ ಹಲವು ಹೆಣ್ಣುಮಕ್ಕಳನ್ನು ದಂಧೆಗೆ ನೂಕಿದ್ದ, ಈ ಹಿಂದೆ ಜೈಲುವಾಸ ಅನುಭವಿಸಿದ್ದ ಅಂಶಗಳೂ ಬೆಳಕಿಗೆ ಬಂದಿತ್ತು.
ಪೊಲೀಸ್ ವರ್ಗಾವಣೆಯಲ್ಲಿ Santro Ravi ಸಕ್ರಿಯ ಪಾತ್ರ ನಿರ್ವಹಿಸಿದ್ದ ಸಂಗತಿ ರಾಜಕೀಯದ ದಾಳವಾಗಿತ್ತು. ಹಲವು ಸಚಿವರು ಹಾಗೂ ಶಾಸಕರೊಂದಿಗೆ Santro Ravi ಇರುವ ಚಿತ್ರಗಳು ವೈರಲ್ ಆಗಿದ್ದವು. ವೇಶ್ಯಾವಾಟಿಕೆಗಾಗಿ ರಷ್ಯಾ, ಇರಾನ್, ಮುಂಬೈ, ಕೊಲ್ಕೊತ್ತಾ ಗಳಿಂದ ಯುವತಿಯರನ್ನು ಕರೆಸುತ್ತಿದ್ದ. ಸ್ಯಾಂಟ್ರೋ ಕಾರಿನಲ್ಲಿ ಯುವತಿಯರನ್ನು ಸರಬರಾಜು ಮಾಡುತ್ತಿದ್ದ ಕಾರಣ ಇವನಿಗೆ ಸ್ಯಾಂಟ್ರೋ ರವಿ ಎನ್ನುವ ಹೆಸರು ಬಂದಿತ್ತು.