ಬೆಂಗಳೂರು,ಜ.30-
ದೇಶಾದ್ಯಂತ ಪರ – ವಿರೋಧದ ಚರ್ಚೆಗೆ ಗ್ರಾಸವಾಗಿರುವ ಗುಜರಾತ್ ಗಲಭೆ ಕುರಿತಾದ BBC ಸಾಕ್ಷ್ಯಚಿತ್ರ ಬೆಂಗಳೂರಿನಲ್ಲೂ ಪ್ರದರ್ಶನಗೊಂಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು BBC ಸಿದ್ಧಪಡಿಸಿರುವ ಈ ಸಾಕ್ಷ್ಯಚಿತ್ರದಲ್ಲಿ ವಿವಾದಾತ್ಮಕ ಅಂಶಗಳಿವೆ ಎಂದು ಸಾಕ್ಷ್ಯಚಿತ್ರದ ಪ್ರಸಾರದ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಆದರೂ ಕೂಡ ದೇಶದ ಹಲವೆಡೆ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಇದೀಗ ಬೆಂಗಳೂರಿನಲ್ಲೂ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲಾಗಿದೆ. ಬೆಂಗಳೂರಿನ ಇನ್ಫ್ಯಾನ್ಟ್ರಿ ರಸ್ತೆಯಲ್ಲಿರುವ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (AISA) ಕಚೇರಿಯಲ್ಲಿ BBC ಸಾಕ್ಷ್ಯಚಿತ್ರ ಪ್ರದರ್ಶಿಸಿರುವುದಾಗಿ ತಿಳಿದುಬಂದಿದೆ. AISA ಜ.25 ರಂದು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸುತ್ತಿರುವುದಾಗಿ ಹೇಳಿ ಆಹ್ವಾನ ನೀಡಿತ್ತು. ಭಾರತೀಯ ಸಮಾಜದಲ್ಲಿ ಕೋಮುವಾದದ ಹೆಚ್ಚಳವನ್ನು ಆಧರಿಸಿದ ಚಲನಚಿತ್ರದ ಪ್ರದರ್ಶನ ಮಾಡಲಾಗುತ್ತಿದ್ದು, ಈ ಕುರಿತ ಚರ್ಚೆಯಲ್ಲಿ ತಮ್ಮೊಂದಿಗೆ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿತ್ತು. ಆದರೆ ಆಮಂತ್ರಣ ಪತ್ರದಲ್ಲಿ ಸಾಕ್ಷ್ಯಚಿತ್ರದ ಹೆಸರನ್ನು ನಮೂದಿಸಿರಲಿಲ್ಲ. ಸ್ಕ್ರೀನಿಂಗ್ ನಂತವೇ ಅದು BBC ಸಾಕ್ಷ್ಯಚಿತ್ರ ಎಂದು ತಿಳಿದುಬಂದಿದೆ. ಈ ಸಂಬಂಧ AISA ಸದಸ್ಯರಾದ ಅರತ್ರಿಕಾ ಡೇ ಅವರು ಪ್ರತಿಕ್ರಿಯೆ ನೀಡಿ, ಸುಮಾರು 40 ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ವೀಕ್ಷಿಸಲು AISA ಕಚೇರಿಗೆ ಬಂದಿದ್ದರು. ಸಾಕ್ಷ್ಯಚಿತ್ರ ವೀಕ್ಷಣೆಯ ಬಳಿಕ ಕೋಮುವಾದದ ಏರಿಕೆಯ ಕುರಿತ ಚರ್ಚೆಯಲ್ಲಿ ಭಾಗವಹಿಸಿದರು ಎಂದು ಹೇಳಿದ್ದಾರೆ.