ನವದೆಹಲಿ
‘ಪ್ರತಿಯೊಬ್ಬ ಭಾರತೀಯನು ಆತ್ಮವಿಶ್ವಾಸದ ಉತ್ತುಂಗದಲ್ಲಿರುವುದು ಇಂದಿನ ದೊಡ್ಡ ಬದಲಾವಣೆಯಾಗಿದೆ. ಭಾರತ ಇಂದು ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯಾಗಿ ಬೆಳೆದಿದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ಅವರು, ‘ಕೇಂದ್ರದಲ್ಲಿ NDA ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಶೀಘ್ರದಲ್ಲಿಯೇ ಒಂಬತ್ತು ವರ್ಷಗಳು ಪೂರೈಸಲಿವೆ. ಈ ಅವಧಿಯಲ್ಲಿ ಎಲ್ಲಾ ಜನರ ಆಶೋತ್ತರಗಳನ್ನು ಈಡೇರಿಸಲು ಸರ್ಕಾರ ಶ್ರಮಿಸಿದೆ’ ಎಂದರು.
‘ಪ್ರಜಾಪ್ರಭುತ್ವದಲ್ಲಿ ಭ್ರಷ್ಟಾಚಾರ ಅತೀ ದೊಡ್ಡ ಶತ್ರು ಎಂಬುದು ನನ್ನ ಸರ್ಕಾರದ ಸ್ಪಷ್ಟ ನಿಲುವಾಗಿದೆ. ಈ ಹಿಂದಿನ ವರ್ಷಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದೆ’ ಎಂದು ಹೇಳಿದರು. ‘ಭಾರತವು ಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರವನ್ನು ಹೊಂದಿದ್ದು, ಅದು ದೊಡ್ಡ ಕನಸುಗಳನ್ನು ಈಡೇರಿಸುವತ್ತ ಕಾರ್ಯನಿರ್ವಹಿಸುತ್ತಿದೆ. ಪ್ರಾಮಾಣಿಕರನ್ನು ಗೌರವಿಸುವ ಮತ್ತು ಬಡವರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಅವರನ್ನು ಶಾಶ್ವತವಾಗಿ ಸಬಲೀಕರಣಗೊಳಿಸಲು ಸರ್ಕಾರ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.
‘ಅಮೃತ ಕಾಲದ 25 ವರ್ಷಗಳ ಅವಧಿಯು ಸ್ವಾತಂತ್ರ್ಯದ ಸುವರ್ಣ ಯುಗವಾಗಿದ್ದು, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಸಮಯವಾಗಿದೆ. ನಾವು ಬಡತನವಿಲ್ಲದ ಭಾರತವನ್ನು, ಮಧ್ಯಮ ವರ್ಗದವರೂ ಸಮೃದ್ಧವಾಗಿರುವ ದೇಶವನ್ನು, ಸಮಾಜಕ್ಕೆ ಮತ್ತು ದೇಶಕ್ಕೆ ದಾರಿ ತೋರಿಸಲು ಯುವಕರು ಮತ್ತು ಮಹಿಳೆಯರು ಮುಂಚೂಣಿಯಲ್ಲಿ ನಿಲ್ಲುವ ಭಾರತವನ್ನು ನಿರ್ಮಿಸಬೇಕಾಗಿದೆ. ಅಲ್ಲದೆ, ದೇಶದ ಯುವಕರು ಯಾವಾಗಲೂ ಸಮಯಕ್ಕಿಂತ ಎರಡು ಹೆಜ್ಜೆ ಮುಂದಿರುವಂತಹ ಭಾರತವನ್ನು ನಾವು ನಿರ್ಮಿಸಬೇಕಾಗಿದೆ’ ಎಂದು ರಾಷ್ಟ್ರಪತಿಗಳು ಹೇಳಿದರು.
‘ಜಗತ್ತಿನಲ್ಲಿ ಎಲ್ಲೆಲ್ಲಿ ರಾಜಕೀಯ ಅಸ್ಥಿರತೆ ಇದೆಯೋ ಆ ದೇಶಗಳು ಇಂದು ಭಾರಿ ಬಿಕ್ಕಟ್ಟಿನಿಂದ ಸುತ್ತುವರಿದಿವೆ. ಆದರೆ, ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನನ್ನ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಂದ, ಇತರ ದೇಶಗಳಿಗೆ ಹೋಲಿಸಿದರೆ ಭಾರತ ಉತ್ತಮ ಸ್ಥಾನದಲ್ಲಿದೆ. ಸಂಪೂರ್ಣ ಪಾರದರ್ಶಕತೆಯೊಂದಿಗೆ ಕೋಟಿಗಟ್ಟಲೆ ಜನರಿಗೆ 27 ಲಕ್ಷ ಕೋಟಿ ರೂಪಾಯಿಗಳನ್ನು ವಿವಿಧ ಯೋಜನೆಗಳ ಮೂಲಕ ಒದಗಿಸಿದೆ. ಇಂತಹ ಯೋಜನೆಗಳು ಮತ್ತು ವ್ಯವಸ್ಥೆಗಳೊಂದಿಗೆ ಭಾರತವು ಕೋವಿಡ್ನಂತಹ ಬಿಕ್ಕಟ್ಟಿನ ಸಮಯದಲ್ಲಿ ಬಡತನದ ರೇಖೆಗಿಂತ ಕೆಳಗಿಳಿಯದಂತೆ ಕೋಟಿಗಟ್ಟಲೆ ಜನರನ್ನು ಉಳಿಸಲು ಸಾಧ್ಯವಾಯಿತು ಎಂದು ವಿಶ್ವ ಬ್ಯಾಂಕ್ ವರದಿ ಹೇಳುತ್ತದೆ’ ಎಂದು ದ್ರೌಪದಿ ಮುರ್ಮು ವಿವರಿಸಿದರು.