ಬೆಂಗಳೂರು, ಫೆ.9-
‘ಪ್ರಾಥಮಿಕ ಶಾಲೆಗಳ ಪದವೀಧರರಲ್ಲದ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಇದನ್ನು ಸರಿ ಪಡಿಸಲು 7ನೇ ವೇತನ ಆಯೋಗಕ್ಕೆ ಈ ಸಂಬಂಧ ಸೂಕ್ತ ಶಿಫಾರಸ್ಸು ಮಾಡಲಾಗುವುದು’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B C Nagesh) ಹೇಳಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಬೆಳ್ಳಿ ಹಬ್ಬ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಫ್ರೌಡಶಾಲಾ ಶಿಕ್ಷಕರಿಗೆ ನೀಡುತ್ತಿರುವ 30 ದಿನಗಳ ಗಳಿಕೆ ರಜೆಯನ್ನು ಪದವಿಧರೇತರ ಮುಖ್ಯೋಪಾಧ್ಯಾಯರಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಅಕ್ಷರ ದಾಸೋಹಕ್ಕೆ ಬಿಡುಗಡೆಯಾಗುವ ಹಣ ಜಮಾ ಮಾಡಿರುವ ಕುರಿತು ಹೊರಡಿಸಿರುವ ಆದೇಶವನ್ನು ಮರುಪರಿಶೀಲಿಸುವುದಾಗಿ ಭರವಸೆ ನೀಡಿದರು. ‘ಪದವಿಧರೇತರ ಸರ್ಕಾರಿ ಮುಖ್ಯೋಪಾಧ್ಯಾಯರ ಸಂಘದ ಬೇಡಿಕೆಗಳನ್ನು ಆದಷ್ಟು ಬೇಗ ಬಗೆಹರಿಸಲು ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದರು. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ (C S Shadakshari) ರವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪ್ರಸನ್ನಕುಮಾರ್ (Prasanna Kumar), ಬೆಂಗಳೂರು ವಿವಿ ಸಮೂಹನ ವಿಭಾಗದ ಮುಖ್ಯಸ್ಥ ಬಿ.ಕೆ.ರವಿ (B. K. Ravi) ಸಾಹಿತಿಗಳು ಹಾಗೂ ಪತ್ರಕರ್ತ ಡಾ. ಎಂ.ಎಸ್.ಮಣಿ (Dr M S Mani) ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.