ಬೆಂಗಳೂರು
‘ಆರ್ಥಿಕ ಶಿಸ್ತಿನಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನ ಪಡೆದಿದೆ. ಕೋವಿಡ್ ನಂತರ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಂಡಿದ್ದು, ತೆರಿಗೆ ಸಂಗ್ರಹಣೆಯ ಗುರಿಯನ್ನು ಯಶಸ್ವಿಯಾಗಿ ಸಾಧಿಸಲಾಗಿದೆ’ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಹೇಳಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು ಕಳೆದೊಂದು ವರ್ಷದ ಸರ್ಕಾರದ ಸಾಧನೆಗಳನ್ನು ಸದನದ ಮುಂದೆ ತೆರೆದಿಟ್ಟರು.
‘ಸುಲಲಿತ ವ್ಯವಹಾರದ ವಿಷಯದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರ ಸ್ಥಾನ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ದೇಶದ ರಫ್ತು ವಹಿವಾಟಿಗೆ ರಾಜ್ಯವು 25.87 ಬಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ಕೊಡುಗೆ ನೀಡಿದೆ. ಇದು ಈವರೆಗಿನ ಅತ್ಯಧಿಕ ಮೊತ್ತವಾಗಿದೆ’ ಎಂದು ತಿಳಿಸಿದರು.
ಸರ್ಕಾರವು ರೈತರು, ಕಾರ್ಮಿಕರು, ಬಡವರು, ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ. ಜೊತೆಗೆ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯ ರಾಜ್ಯವಾಗಿ ದಾಪುಗಾಲಿಡುತ್ತಿದೆ. ಎಲ್ಲರನ್ನು ಒಳಗೊಂಡ ಅಭಿವೃದ್ಧಿಯ ಮಾದರಿಯನ್ನು ಅನುಸರಿಸುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಹಾಕಿಕೊಟ್ಟ ಪ್ರಗತಿ ಪಥವನ್ನು ಯಶಸ್ವಿಯಾಗಿ ಕ್ರಮಿಸುವ ವಿಶ್ವಾಸ ನನಗಿದೆ ಎಂದು ಹೇಳಿದರು. ರೈತನನ್ನು ಸದೃಢಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿಯನ್ನು ನೇಕಾರರು, ಕೃಷಿ ಕಾರ್ಮಿಕರು, ಮುಂತಾದ ವಿವಿಧ ವರ್ಗಗಳಿಗೂ ವಿಸ್ತರಿಸಲಾಗಿದೆ. ರೈತಶಕ್ತಿ ಯೋಜನೆಯಡಿ ಕೃಷಿ ಯಾಂತ್ರೀಕರಣ ಪ್ರೋತ್ಸಾಹಿಸಲು ಪ್ರತಿ ಎಕರೆಗೆ 250 ರೂಪಾಯಿಗಳಂತೆ ಡೀಸೆಲ್ ಸಹಾಯಧನ ನೀಡುತ್ತಿದ್ದು, ಇದಕ್ಕಾಗಿ 400 ಕೋಟಿ ರೂಪಾಯಿಗಳನ್ನು ಒದಗಿಸಿದ್ದು, 386.98 ಕೋಟಿ ರೂಪಾಯಿ, ಬಿಡುಗಡೆ ಮಾಡಿದೆ. ಇದರಿಂದ 53.22 ಲಕ್ಷ ರೈತರುಗಳಿಗೆ ನೇರ ನಗದು ವರ್ಗಾವಣೆ ಮೂಲಕ ಸಹಾಯ ಮಾಡಲಾಗಿದೆ ಎಂದರು.
ಕೀಟ ರೋಗ, ಕಳೆಬಾಧೆ ಮತ್ತು ಮಣ್ಣಿನ ಪೋಷಕಾಂಶದ ಸಮರ್ಪಕ ನಿರ್ವಹಣೆಗಾಗಿ ಕೃಷಿ ಸಂಜೀವಿನಿ ಯೋಜನೆಯಡಿ 160 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ಲೋಕಾರ್ಪಣೆ ಮಾಡಿದ್ದು, 2022-23ನೇ ಸಾಲಿಗೆ 64 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (Mobile Plant Health Clinic) ವನ್ನು ಅನುಷ್ಠಾನ ಮಾಡಲಾಗಿದೆ ಎಂದು ಹೇಳಿದರು.
2022-23ನೇ ಸಾಲಿನಲ್ಲಿ 15,066 ಕೋಟಿ ರೂಪಾಯಿಗಳ ಅಲ್ಪಾವಧಿ ಬೆಳೆ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಡಿಸೆಂಬರ್ ಅಂತ್ಯಕ್ಕೆ ಒಟ್ಟು 20.19 ಲಕ್ಷ ರೈತರಿಗೆ ವಿತರಿಸಲಾಗಿದೆ. ಡಿಸೆಂಬರ್ ಅಂತ್ಯದವರೆಗೆ 29,638 ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ 1,215 ಕೋಟಿ ರೂಪಾಯಿಗಳ ಸಾಲವನ್ನು ವಿತರಿಸಲಾಗಿದೆ. ವಿವಿಧ ವರ್ಗಗಳಿಗೂ ವಿಸ್ತರಿಸಲಾಗಿದೆ. ಅದರಂತೆ 1,079 ಲಕ್ಷ ವಿದ್ಯಾರ್ಥಿಗಳಿಗೆ 484 ಕೋಟಿ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ವರ್ಗಾಯಿಸಲಾಗಿದೆ ಎಂದರು.
ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ 6038.98 ಕೋಟಿ ರೂಪಾಯಿಗಳ ಬಂಡವಾಳದಲ್ಲಿ ಪ್ರಸ್ತುತ ವರ್ಷದಲ್ಲಿ 27.85 ಲಕ್ಷ ಕುಟುಂಬಗಳ 50 ಲಕ್ಷ ಜನರಿಗೆ ಕೆಲಸ ಒದಗಿಸಿದೆ. ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಜಲ್ ಜೀವನ್ ಮಿಷನ್ (Jal Jeevan Mission) ಯೋಜನೆಯಡಿ ಆರಂಭದಿಂದ ಇಲ್ಲಿಯವರೆಗೆ 37.54 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದ್ದು, ಇದರಿಂದ ರಾಜ್ಯದ ಶೇಕಡ 61.34 ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದಂತಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜನವರಿ ಅಂತ್ಯದವರೆಗೆ ರಾಜಸ್ವ ಸಂಗ್ರಹಣೆಯಲ್ಲಿ ಶೇಕಡ 91ರಷ್ಟು ಗುರಿ ಸಾಧನೆ ಮಾಡಿದೆ. ಸ್ವಂತ ತೆರಿಗೆ ರಾಜಸ್ವ ಸಂಗ್ರಹಣೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 21ರಷ್ಟು ಹೆಚ್ಚಳವಾಗಿದೆ. ಬಜೆಟ್ ಅಂದಾಜಿನ ಶೇಕಡ 75ರಷ್ಟು ಮೊತ್ತವನ್ನು ಈವರೆಗೆ ವೆಚ್ಚ ಮಾಡಲಾಗಿದೆ ಎಂದರು. 2022ರ ಜನವರಿ ಅಂತ್ಯಕ್ಕೆ ರಾಜ್ಯ ಸರ್ಕಾರದ ಬಂಡವಾಳ ವೆಚ್ಚವು 26,915 ಕೋಟಿಯಷ್ಟಿತ್ತು. 2023ರ ಜನವರಿ ಅಂತ್ಯಕ್ಮೆ ಬಂಡವಾಳ ವೆಚ್ಚದ ಪ್ರಮಾಣವು 33,991 ಕೋಟಿಯಷ್ಟಿದ್ದು, ಬಂಡವಾಳ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಶ್ಲಾಘಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (Schedule Caste and Schedule Tribe) ಗಳ ಮೀಸಲಾತಿಯನ್ನು ಹೆಚ್ಚಿಸುವ ಐತಿಹಾಸಿಕ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲಾಗಿದೆ. ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 29,000 ಕೋಟಿ ವೆಚ್ಚ ಮಾಡಲಾಗಿದೆ ಎಂದರು.
ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ಮಕ್ಕಳಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ‘ದೀನ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ’ (Deendayal Upadhyaya Souhard Vidyarthi Nilaya) ಎಂಬ ಹೊಸ ಯೋಜನೆ ಜಾರಿಗೊಳಿಸಲಾಗಿದೆ.
ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1000 ಸಾಮರ್ಥ್ಯದ ಬಹುಮಹಡಿಯ ವಿದ್ಯಾರ್ಥಿ ನಿಲಯ ಸಮುಚ್ಚಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.