ಎಲ್ಲ ಕಾಲದಲ್ಲೂ ಎಲ್ಲರಿಗೂ ಕೈಗೆಟಕುವ ದರದಲ್ಲಿ ಸಿಗುವ ತರಕಾರಿ “ಬೆಂಡೆಕಾಯಿ” (Lady’s fingers) . ಇದು ಅಡುಗೆಯಲ್ಲಿ ರುಚಿ ನೀಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ಸಹಕಾರಿ. ಆದರೆ, ಇದನ್ನು ಇಷ್ಟ ಪಡುವವರ ಸಂಖ್ಯೆಗಿಂತ ಇಷ್ಟ ಪಡದವರ ಸಂಖ್ಯೆಯೇ ಹೆಚ್ಚು. ಕಾರಣ, ಇದು ಹೊಂದಿರುವ ಲೋಳೆಯ ಅಂಶ. ಈ ಲೋಳೆಯ ಅಂಶವೇ ಆರೋಗ್ಯಕ್ಕೆ ಹೆಚ್ಚು ಉಪಯೋಗಕಾರಿ ಎಂದು ನಿಮಗೆ ಗೊತ್ತೇ?
ಬೆಂಡೆಕಾಯಿಯಲ್ಲಿರುವ ಆರೋಗ್ಯವರ್ಧಕ ಪೋಷಕಾಂಶಗಳು –
ಪೊಟ್ಯಾಸಿಯಮ್, ಲಿನೋಲಿಕ್ ಆಮ್ಲ, ವಿಟಮಿನ್ ಸಿ, ಕ್ಯಾಲ್ಸಿಯಂ, ಪ್ರೋಟೀನ್, ಫೋಲೇಟ್, ಫೈಟೋ ಕೆಮಿಕಲ್ಸ್, ಆ್ಯ೦ಟಿ ಆಕ್ಸಿಡಂಟ್ಸ್ , ಫೈಬರ್ ಸೇರಿದಂತೆ ಇನ್ನೂ ಹಲವು.
ಆರೋಗ್ಯ ವರ್ಧನೆ ಹೇಗೆ?
- ಇದರಲ್ಲಿ, ಹೇರಳವಾದ ನಾರಿನಂಶವಿದೆ. ಇದು ನಿಧಾನವಾಗಿ ಸಕ್ಕರೆಯ ಅಂಶವನ್ನು ಬಿಡುಗಡೆಗೊಳಿಸುತ್ತದೆ. ಹಾಗಾಗಿ, ಹೆಚ್ಚು ಸಮಯದ ವರೆಗೆ ಹಸಿವಿನ ಅನುಭವ ನೀಡದೆ, ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಈ ಮೂಲಕ, ಕಡಿಮೆ ಕ್ಯಾಲೋರಿಗಳ ಸೇವನೆಗೆ ಸಹಕಾರಿ. ಇದರಿಂದ ಮಧುಮೇಹ ನಿಯಂತ್ರಣದಲ್ಲಿರುವುದಲ್ಲದೆ, ದೇಹದ ತೂಕವೂ ನಿಯಂತ್ರಣದಲ್ಲಿರುತ್ತದೆ.
- ಬೆಂಡೆಕಾಯಿ ಪೆಕ್ಟಿನ್ (pectin) ಎನ್ನುವ ಎಂಜೈಮ್ ಹೊಂದಿರುತ್ತದೆ. ಇದು ಕೆಟ್ಟ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟರಾಲ್ ಅನ್ನು ಅಧಿಕಗೊಳಿಸುತ್ತದೆ. ಈ ಮೂಲಕ ಹೃದಯದ ಆರೋಗ್ಯಕ್ಕೂ ಸಹಕಾರಿ.
- ಜೀವಕೋಶಗಳ ಮೇಲಿನ ಆಕ್ಸಿಡೇಟಿವ್ ಹಾನಿ (oxidative damage) ಯನ್ನು ತಡೆದು, cancer ಸಂಭವವನ್ನು ಕಡಿಮೆ ಮಾಡುತ್ತದೆ.
- ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿ, ರಕ್ತಹೀನತೆಯನ್ನೂ ತಡೆಯುತ್ತದೆ.
- ಬೆಂಡೆಕಾಯಿಯ ಲೋಳೆಯು ಪಿತ್ತಜನಕಾಂಗ (Liver)ದ ಆರೋಗ್ಯವನ್ನೂ ವೃದ್ಧಿಸುತ್ತದೆ.
- ಇದರಲ್ಲಿರುವ ಕ್ಯಾರೊಟಿನಾಯ್ಡ್ಸ್(carotenoids) ಕಣ್ಣು ಮತ್ತು ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ.
- ಇದು ಹೇರಳವಾಗಿ ಫೋಲೇಟ್ (folate) ಅಂಶವನ್ನು ಹೊಂದಿದೆ. ಹಾಗಾಗಿ, ಗರ್ಭಿಣಿಯರಿಗೆ ಬಲು ಉಪಕಾರಿ. ಗರ್ಭವಾಸ್ಥೆಯಲ್ಲಿ ಫೋಲಿಕ್ ಆ್ಯಸಿಡ್ (folic acid) ಹೆಚ್ಚು ಬೇಕಾಗುವುದರಿಂದ, ಗರ್ಭಿಣಿಯರು ಅಥವಾ ಗರ್ಭ ಧರಿಸಲು ಬಯಸುವವರು ಬೆಂಡೆಕಾಯಿಯನ್ನು ಸೇವಿಸುವುದು ಆರೋಗ್ಯಕರ.
- ಇದು ರೋಗ ನಿರೋಧಕ ಶಕ್ತಿ ಮತ್ತು ನೆನಪಿನ ಶಕ್ತಿಯನ್ನೂ ವೃದ್ಧಿಸುತ್ತದೆ.
- ಇದರಲ್ಲಿರುವ ಲೋಳೆಯ ಅಂಶವು ಮಲಬದ್ಧತೆಗೂ ಸಹಕಾರಿ.
ಇದನ್ನು ಹೇಗೆ ಸೇವಿಸಬಹುದು?
ಬೆಂಡೆಕಾಯಿಯನ್ನು ಮೂಲ ರೂಪದಲ್ಲಿ ಅಂದರೆ ಹಸಿಯಾಗಿಯೇ ತಿನ್ನುವವರೂ ಇದ್ದಾರೆ. ಹೀಗೆ ಬೆಂಡೆಕಾಯಿಯನ್ನು ಸೇವಿಸುವುದೂ ಆರೋಗ್ಯಕರವಾದರೂ ಹೆಚ್ಚು ಜನರು ಬೆಂಡೆಕಾಯಿಯನ್ನು ಈ ರೂಪದಲ್ಲಿ ಸೇವಿಸಲು ಇಷ್ಟ ಪಡುವುದಿಲ್ಲ. ಈ ರೂಪದಲ್ಲಿ ಹೆಚ್ಚು ತಿನ್ನಲೂ ಸಾಧ್ಯವಿಲ್ಲ.
ಇದನ್ನು ಬೇಯಿಸಿ ಅಥವಾ ಎಣ್ಣೆಯಲ್ಲಿ ಹುರಿದು ಪದಾರ್ಥಗಳಲ್ಲಿ ಬಳಸಬಹುದು. ಹುಳಿ, ಸಾರು, ಪಲ್ಯ, ಗೊಜ್ಜು, ಸ್ನ್ಯಾಕ್ಸ್ ಸೇರಿದಂತೆ ಇನ್ನೂ ಹಲವು ವಿಧಗಳಲ್ಲಿ ಚಪಾತಿ, ರೊಟ್ಟಿ, ಅನ್ನದೊಂದಿಗೆ ಬಳಸಬಹುದು.
ಅಡುಗೆಯಲ್ಲಿ ಬಳಸುವಾಗ ಸಹಾಯವಾಗುವ ಟಿಪ್ಪಣಿಗಳು
- ಬೆಂಡೆಕಾಯಿಗಳನ್ನು ತೊಳೆದು, ಒಣಗಿದ ಬಟ್ಟೆಯಲ್ಲಿ ಒರೆಸಿ, ಪೂರ್ತಿ ತೇವಾಂಶ ಹೋದ ಮೇಲೆ ಕತ್ತರಿಸಿದರೆ, ಕತ್ತರಿಸುವಾಗ ಲೋಳೆಯು ಕಷ್ಟ ಕೊಡದು.
- ಬೆಂಡೆಕಾಯಿಗಳನ್ನು ಹುರಿಯುವಾಗ ಸ್ವಲ್ಪ ಹೆಚ್ಚು ಎಣ್ಣೆ ಬಳಸುವುದರಿಂದ, ಲೋಳೆಯ ಅಂಶ ಕಡಿಮೆಯಾಗುವುದು.
- ನಿಂಬೆ ರಸ, ಆಮ್ ಚೂರ್ ಪುಡಿ, ಮೊಸರು, ವಿನೆಗರ್ ಥರದ ಹುಳಿ ಅಂಶವಿರುವ ಪದಾರ್ಥವನ್ನು ಬಳಸುವುದರಿಂದಲೂ ಬೆಂಡೆಕಾಯಿಯ ಲೋಳೆಯನ್ನು ತೆಗೆಯಬಹುದು.
ಬೆಂಡೆಕಾಯಾ? ಎಂದು ಮೂಗು ಮುರಿಯುವವರು ಇದರ ಆರೋಗ್ಯ ವರ್ಧಕ ಗುಣಗಳನ್ನು ತಿಳಿದು, ಆಹಾ ಬೆಂಡೆಕಾಯಿ ಎಂದು ಇಷ್ಟ ಪಟ್ಟು ತಿನ್ನಿ.