ನವದೆಹಲಿ,ಫೆ.15-
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಹಾಗೂ ತಮಿಳುನಾಡಿನ ಸ್ಫೋಟ ಪ್ರಕರಣದ ಸಂಬಂಧ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಕರ್ನಾಟಕ ಸೇರಿ ಮೂರು ರಾಜ್ಯಗಳ ಮೇಲೆ ದಾಳಿ ನಡೆಸಿದ್ದಾರೆ.
ಕಳೆದ ವರ್ಷದ ಕೊಯಮುತ್ತೂರು (Coimbatore, Tamil Nadu) ಹಾಗೂ ಮಂಗಳೂರು ಸ್ಫೋಟ (Mangalore cooker bomb blast) ಪ್ರಕರಣಕ್ಕೆ ಸಂಬಂಧ ಕರ್ನಾಟಕ, ತಮಿಳುನಾಡು, ಹಾಗೂ ಕೇರಳ ರಾಜ್ಯಗಳ 60 ಪ್ರದೇಶಗಳ ಮೇಲೆ ಏಕಕಾಲಕ್ಕೆ NIA ಅಧಿಕಾರಿಗಳು ದಾಳಿ ಮಾಡಿದ್ದು, ಕರ್ನಾಟಕದಲ್ಲಿ 40 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೇರಳದ ಪಲ್ಲಕಡ (Palakkad) ನಲ್ಲಿ ದಾಳಿ ನಡೆಸಿ ಎಲೆಕ್ಟ್ರಾನಿಕ್ ಡಿವೈಸ್ಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡು, ಪರಿಶೀಲನೆ ನಡೆಸಿ, ಮಾಹಿತಿಯನ್ನು ಸಂಗ್ರಹಿಸತೊಡಗಿದ್ದಾರೆ.
ತಮಿಳುನಾಡಿನ ಕೊಯಮುತ್ತೂರನ ಕೊಟ್ಟಯ್ ಈಶ್ವರನ್ ದೇವಸ್ಥಾನ ಎದುರುಗಡೆ ಸ್ಫೋಟಗೊಂಡ ಕಾರ್ ಸ್ಫೋಟದಲ್ಲಿ ಜಮೀಶಾ ಮುಬಿನ್ ಎಂಬುವನು ಸಾವನ್ನಪ್ಪಿದ್ದನು. ಮೃತ ಜಮೀಶಾ ಮುಬಿನ್ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಐಸಿಸ್ (ISIS) ನೊಂದಿಗೆ ಗುರುತಿಸಿಕೊಂಡಿದ್ದ. ಭಯೋತ್ಪಾದನೆ ಸೃಷ್ಟಿಸುವ ಸಲುವಾಗಿ ಆತ್ಮಾಹುತಿ ದಾಳಿ ನಡೆಸಲು ಮತ್ತು ದೇವಾಲಯದ ಸಂಕೀರ್ಣಕ್ಕೆ ವ್ಯಾಪಕ ಹಾನಿಯನ್ನುಂಟುಮಾಡಲು ಯೋಜಿಸಿದ್ದ ಎಂದು NIA ಹೇಳಿಕೆಯಲ್ಲಿ ತಿಳಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಅಧಿಕಾರಿಗಳು ಕಳೆದ ವರ್ಷ ಅಕ್ಟೋಬರ್ 23 ರಂದು ತಮಿಳನಾಡಿನ 43 ಸ್ಥಳಗಳಲ್ಲಿ ದಾಳಿ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದ್ದರು. ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಜೊತೆ ಜಮೀಶಾ ಮುಬಿನ್ ನಂಟು ಹೊಂದಿದ್ದು, ಈತ ಆತ್ಮಾಹುತಿ ಬಾಂಬ್ಗೆ ಧಾರ್ಮಿಕ ಕೇಂದ್ರಗಳು ಮತ್ತು ಸ್ಮಾರಕಗಳನ್ನು ಟಾರ್ಗೆಟ್ ಮಾಡಿದ್ದನು ಎಂದು NIA ಹೇಳಿದೆ. ಈ ಪ್ರಕರಣದಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ. ಅಧಿಕಾರಿಗಳು ಸ್ಫೋಟವನ್ನು “ಲೋನ್ ವುಲ್ಫ್” ದಾಳಿ (lone wolf attack) ಎಂದು ಕರೆದಿದ್ದಾರೆ.
ಪ್ರಕರಣದಲ್ಲಿ ಬಂಧಿತ ಆರೋಪಿ ಉಮರ್ ಫಾರೂಕ್ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಮೃತ ಜಮೀಶಾ ಮುಬಿನ್ ಸೇರಿದಂತೆ ಮೊಹಮ್ಮದ್ ಅಜರುದ್ದೀನ್, ಶೇಖ್ ಹಿದಾಯತುಲ್ಲಾ ಮತ್ತು ಸನೋಫರ್ ಅಲಿ ಭಾಗವಹಿಸಿದ್ದರು. ಎಲ್ಲರೂ ಭಯೋತ್ಪಾದಕ ಕೃತ್ಯಗಳಿಗೆ ತಯಾರಿ ಮತ್ತು ಅದನ್ನು ಕಾರ್ಯಗತಗೊಳಿಸುವ ಬಗ್ಗೆ ಸಂಚು ರೂಪಿಸಿದ್ದರು ಎಂದು NIA ತಿಳಿಸಿದೆ. ಇನ್ನು ಮಂಗಳೂರಿನಲ್ಲಿ ನಡೆದ ಆಟೋ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಆಟೋ ಚಾಲಕ ಮತ್ತು ಆರೋಪಿ ಮೊಹ್ಮದ್ ಶಾರಿಕ್ ಇಬ್ಬರೂ ಗಾಯಗೊಂಡಿದ್ದರು. ಸ್ಫೋಟ ಪ್ರಕರಣದ ತನಿಖೆಯ ಸಂದರ್ಭದಲ್ಲಿ, ಶಾರಿಕ್ ಮತ್ತು ಆತನ ಸಹಚರರು ಕರ್ನಾಟಕದ ಅರಣ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಕ್ಯಾಂಪ್ (Islamic State Camp) ಸ್ಥಾಪಿಸಲು ಬಯಸಿದ್ದರು ಎಂದು NIA ಗೆ ತಿಳಿದುಬಂದಿದೆ.
ಅಲ್ಲದೇ ಮಂಗಳೂರು ಸುತ್ತಮುತ್ತಲಿನ ಕಾಡಿನಲ್ಲಿ ಮೊಹ್ಮದ್ ಶಾರಿಕ್ ಮತ್ತು ಆತನ ಸಹಚರರು ಇಸ್ಲಾಮಿಕ್ ಸ್ಟೇಟ್ ಕ್ಯಾಂಪ್ನ್ನು ಹೂಡಿದ್ದು, ಅಲ್ಲಿ ಮೊಹ್ಮದ್ ಶಾರಿಕ್ ತರಬೇತಿ ಪಡೆದಿದ್ದನು ಎಂದು NIA ಹೇಳಿದೆ.