ಬೆಂಗಳೂರು, ಫೆ. 15,
‘ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಆರೋಗ್ಯಕ್ಕೆ ಹಾಗೂ ಪರಿಸರಕ್ಕೆ ಹಾನಿಕಾರಕ. ಹೀಗಾಗಿ ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ (single use plastic) ನಿಷೇಧಿಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr Sudhakar K) ತಿಳಿಸಿದ್ದಾರೆ.
‘ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಗೆ ಹೆಚ್ಚು ನಿರ್ಬಂಧಗಳನ್ನು ಹೇರಿದೆ. ಇದನ್ನು ಅನುಸರಿಸಿ ರಾಜ್ಯ ಸರ್ಕಾರವು ಪ್ಲಾಸ್ಟಿಕ್ ಬ್ಯಾಗ್ ಹಾಗೂ ಇತರೆ ಉತ್ಪನ್ನಗಳ ಬಳಕೆ ನಿರ್ಬಂಧಿಸಿ 2016 ರ ಮಾರ್ಚ್ 11 ರಂದು ಅಧಿಸೂಚನೆ ಹೊರಡಿಸಿದೆ’ ಎಂದು ಹೇಳಿದ್ದಾರೆ.
‘ಈ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದಿಂದ 2023 ರ ಫೆಬ್ರವರಿ 1 ರಂದು ಸುತ್ತೋಲೆ ಹೊರಡಿಸಲಾಗಿದೆ. ಇದರಲ್ಲಿ ಕೆಲ ನಿರ್ದಿಷ್ಟ ಕ್ರಮಗಳನ್ನು ಅನುಸರಿಸುವಂತೆ, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಸರ್ಜನ್‌ಗಳು, AMO ಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳನ್ನು ಫೆಬ್ರವರಿ 1 ರಿಂದಲೇ ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಿಸಬೇಕು. ಕಚೇರಿಯ ಒಳಗೆ ಹಾಗೂ ಆಸ್ಪತ್ರೆಯ ಒಳಗೆ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ತರದಂತೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಈ ಕುರಿತು ಆರೋಗ್ಯ ಕೇಂದ್ರಗಳ ಆವರಣದಲ್ಲಿ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು’ ಎಂದು ಸೂಚಿಸಿದ್ದಾರೆ.
‘ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಾದ ಬಾಟಲ್, ಕವರ್, ಬ್ಯಾಗ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಒಳಗೆ ತರುವುದನ್ನು ತಡೆಯುವಂತೆ ಆರೋಗ್ಯ ಕೇಂದ್ರಗಳ ಭದ್ರತಾ ಸಿಬ್ಬಂದಿಗೆ ಸೂಚಿಸಬೇಕು. ಆರೋಗ್ಯ ಕೇಂದ್ರಗಳ ಕ್ಯಾಂಟೀನ್‌ಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸದಂತೆ ಹಾಗೂ ಗ್ರಾಹಕರಿಗೆ ಅಂತಹ ಉತ್ಪನ್ನಗಳನ್ನು ನೀಡದಂತೆ ಸೂಚಿಸಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.