ಬೆಂಗಳೂರು
ಈ ಬಾರಿಯ ವಿಧಾನಸಭೆ ಚುನಾವಣೆ ಹಲವು ಕುತೂಹಲ ವಿದ್ಯಮಾನಗಳಿಗೆ ಸಾಕ್ಷಿಯಾಗಲಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದ ಹಾಗೂ ಸೇವೆಗೆ ರಾಜೀನಾಮೆ ಸಲ್ಲಿಸಿದ ಹಲವರು ಚುನಾವಣಾ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಇದೀಗ ಈ ಸರದಿಗೆ ನಿವೃತ್ತ IAS ಅಧಿಕಾರಿ ಎಂ.ಲಕ್ಷೀನಾರಾಯಣ (M. Lakshminarayana) ಸೇರ್ಪಡೆಯಾಗಿದ್ದಾರೆ.
ಇವರು, ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರ (Hagaribommanahalli, Vijayanagara) ದಿಂದ ಕಣಕ್ಕೀಳಿಯಲು ಸಜ್ಜಾಗಿದ್ದಾರೆ. ಪಕ್ಷದ ವರಿಷ್ಠರ ಸೂಚನೆಯಂತೆ ಈಗಾಗಲೇ ಕ್ಷೇತ್ರದಲ್ಲಿ ಕಾರ್ಯಕರ್ತರ ಜೊತೆ ಸಂಘಟನೆ ಆರಂಭಿಸಿರುವ ಅವರು, ಮತದಾರರ ಮನವೊಲಿಕೆಗೆ ನಾನಾ ಕಸರತ್ತು ನಡೆಸುತ್ತಿದ್ದಾರೆ. ಕಳೆದ 2008 ರಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ BJP ಅಭ್ಯರ್ಥಿ ನೇಮಿರಾಜ್ ನಾಯಕ್ ಒಂದು ಬಾರಿ ಗೆಲುವು ಸಾಧಿಸಿದ್ದರು. ಸದ್ಯ Congress ನ ಭೀಮಾ ನಾಯಕ್ (Bheema Naik) ಹಾಲಿ ಶಾಸಕರಾಗಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯೊಂದಿಗೆ ಮತ್ತೊಮ್ಮೆ ಕಣಕ್ಕಿಳಿಯುತ್ತಿದ್ದಾರೆ.
ಒಮ್ಮೆ JDS ನಿಂದ ಗೆಲುವು ಸಾಧಿಸಿದ ಭೀಮಾ ನಾಯಕ್ ನಂತರ Congress ಸೇರ್ಪಡೆಯಾದರು. ಈ ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ಹಾಕಿಕೊಳ್ಳಬೇಕೆಂದು ತಂತ್ರ ರೂಪಿಸುತ್ತಿದ್ದು, ನಿವೃತ್ತ IAS ಅಧಿಕಾರಿಯಾದ ಲಕ್ಷ್ಮೀನಾರಾಯಣ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು, ಕ್ಷೇತ್ರ ಪರಿಚಯ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಅದರಂತೆ ಲಕ್ಷ್ಮೀನಾರಾಯಣ ಅವರು ಈಗಾಗಲೇ BJP ಯ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಚುನಾವಣಾ ಕಣಕ್ಕೆ ಧುಮುಕುವ ಉತ್ಸಾಹದಲ್ಲಿದ್ದಾರೆ. ವಸತಿ, ಸಮಾಜ ಕಲ್ಯಾಣ, ಲೋಕೋಪಯೋಗಿ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಜೊತೆಗೆ BBMP ಆಯುಕ್ತರಾಗಿಯೂ ಕೆಲಸ ಮಾಡಿರುವ ಎಂ ಲಕ್ಷ್ಮೀನಾರಾಯಣ ಅವರನ್ನು ಮತ್ತೆ ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು.