ಬೆಂಗಳೂರು, ಫೆ. 24- ಹಲವಾರು ಸಿಹಿ,ಕಹಿ ಘಟನೆಗಳೊಂದಿಗೆ15ನೇ ವಿಧಾನಸಭೆಯ ಅಧಿವೇಶನ ಅಂತ್ಯಗೊಂಡಿದೆ.
ಮೂವರು ಮುಖ್ಯಮಂತ್ರಿಗಳು, ನಾಲ್ವರು ಉಪ ಮುಖ್ಯಮಂತ್ರಿಗಳು ಇಬ್ಬರು ಪ್ರತಿಪಕ್ಷ ನಾಯಕರು ಹಾಗೂ ಇಬ್ಬರು ವಿಧಾನಸಭಾಧ್ಯಕ್ಷರನ್ನು ಕಂಡ ವಿಧಾನಸಭೆ ಅಂತ್ಯಗೊಂಡಿದೆ.
ಕಲಾಪದ ಕೊನೆಯ ದಿನ ವಿಧಾನಸಭೆಯಲ್ಲಿ ವಿದಾಯ ಭಾಷಣದ್ದೇ ಕಾರುಬಾರು.ಕಳೆದ ಐದು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ, ಜನತೆಯ ಹಿತಕ್ಕಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡು ತನುಮನದಿಂದ ದುಡಿದ ಸಂತೃಪ್ತ, ಸಾರ್ಥಕ ಭಾವನೆಯನ್ನು ಎಲ್ಲ ಸದಸ್ಯರುಗಳು ವ್ಯಕ್ತಪಡಿಸಿ, ಪರಸ್ಪರ ಶುಭಾಶಯ, ಅಭಿನಂದನೆಗಳ ವಿನಿಮಯ ಮಾಡಿಕೊಂಡರು.
ಮತ್ತೆ ಚುನಾವಣೆಯಲ್ಲಿ ಗೆದ್ದು ಸದನಕ್ಕೆ ಬರೋಣ ಶುಭ ಹಾರೈಕೆಗಳ ವಿನಿಮಯವೂ ಸದನದಲ್ಲಿ ಆಯಿತು.
ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 15ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ಇಂದು ಸದಸ್ಯರುಗಳೆಲ್ಲರೂ ತಮ್ಮ ಕರ್ತವ್ಯ ಹಾಗೂ ಸದನದ ಕಲಾಪಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡು ರಾಜ್ಯದ ಹಿತಕ್ಕಾಗಿ ತಾವು ಕೆಲಸ ಮಾಡಿದ ರೀತಿಗೆ ಸದನ ಅಭಿನಂದನೆಗಳನ್ನು ಸಲ್ಲಿಸಲಿದೆ ಎಂದು ಹೇಳುವ ಮೂಲಕ ಈ ಕುರಿತಾದ ಚರ್ಚೆಗೆ ಅವಕಾಶ ಮಾಡಿಕೊಟ್ಟರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಾನೂನು ಸಚಿವ ಮಾಧುಸ್ವಾಮಿ, ಕಾಂಗ್ರೆಸ್‌ನ ಯು.ಟಿ. ಖಾದರ್, ಜೆಡಿಎಸ್‌ನ ಬಂಡೆಪ್ಪ ಕಾಶಂಪೂರ್ ಸೇರಿದಂತೆ ಇಂದು ಸದನದಲ್ಲಿ ಹಾಜರಿದ್ದ ಬಹುತೇಕ ಸದಸ್ಯರುಗಳು ತಾವು ಮಾಡಿದ ಕೆಲಸ, ಸದನದಲ್ಲಿ ಜನ ಹಿತಕ್ಕಾಗಿ ಕೈಗೊಂಡ ತೀರ್ಮಾನ, ಹೋರಾಟ ಎಲ್ಲವನ್ನು ಮೆಲುಕು ಹಾಕಿದರು.
5 ವರ್ಷಗಳ ಕಾಲ ಶಾಸಕರಾಗಿ ಸದನದಲ್ಲಿ ಏನೇ ಪ್ರಸ್ತಾಪ ಮಾಡಿದ್ದರೂ ಜನ ಹಿತಕ್ಕಾಗಿ ಎಲ್ಲವನ್ನು ಮಾಡಿದ್ದೇವೆ. ತಮ್ಮ ವಿಚಾರ ಅಭಿವ್ಯಕ್ತಿಕೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಆಗಿದೆ. ಈ ವಿಚಾರಗಳ ಅಭಿವ್ಯಕ್ತಿಕೆ ಸಂದರ್ಭದಲ್ಲಿ ಕೆಲವೊಮ್ಮೆ ಸಿಟ್ಟು, ಆವೇಶ, ಕೆಲ ಮಾತುಗಳು ಬಂದಿದ್ದರೂ ಅದೆಲ್ಲ ವೈಯುಕ್ತಿಕವಾಗಿ ಅಲ್ಲ. ಕೇವಲ ರಾಜ್ಯದ ಅಭಿವೃದ್ದಿ ಹಾಗೂ ಜನರ ಬದುಕಿಗೆ ಒಳ್ಳೆಯದನ್ನು ಮಾಡುವ ಸದುದ್ದೇಶದಿಂದ ಆಡಿದ ಮಾತುಗಳಾಗಿವೆ ಅಷ್ಟೇ. ಏನೇ ಇರಲಿ, ನಾವೆಲ್ಲಾ ವೈಯುಕ್ತಿಕವಾಗಿ ಸ್ನೇಹಿತರು. ಯಾವುದೇ ಕಹಿ ಮನಸ್ಸಿನಲ್ಲಿ ಇಲ್ಲ. ಎಲ್ಲೇ ಸಿಕ್ಕರೂ ಉಭಯ ಕುಶಲೋಪರಿ ಇದ್ದೇ ಇರುತ್ತದೆ ಎಂಬ ಭಾವನೆಯೊಂದಿಗೆ ಎಲ್ಲ ಸದಸ್ಯರು ವಿದಾಯ ಭಾಷಣ ಮಾಡಿದರು.
ಐತಿಹಾಸಿಕ ನಿರ್ಧಾರ:
ವಿದಾಯ ಭಾಷಣ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನೇಕ ಸವಾಲುಗಳ ನಡುವೆಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದು ಒಂದು ಐತಿಹಾಸಿಕ ನಿರ್ಧಾರ. ಬರುವ ದಿನಗಳಲ್ಲಿ ಇದರ ಲಾಭ ಆ ಸಮುದಾಯಕ್ಕೆ ಸಿಗಲಿದೆ ಎಂದು ಹೇಳಿದರು.
15 ನೇ ವಿಧಾನಸಭೆ 5 ವರ್ಷ ಕಾಲಘಟ್ಟದಲ್ಲಿ ಎರಡಮೂರು ವಿಚಾರಗಳನ್ನು ನಮ್ಮನ್ನು ಗಟ್ಟಿಗೊಳಿಸುತ್ತಾ ಹೋಗಿವೆ. ಈ ಐದು ವರ್ಷಗಳಲ್ಲಿ ನಾವು ಎಂದೂ ಕಾಣದ ದಿನಗಳನ್ನು ನೋಡಿದ್ದೇವೆ. ಕೋವಿಡ್ ಕಾಲದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದೆವು, ಸದನದಲ್ಲಿ ಗ್ಲಾಸ್ ಹಾಕಿ ಕಲಾಪ ನಡೆಸಲಾಯಿತು. ಇದು ಮರೆಯಲಾರದ ದಿನ ಎಂದರು.
ಭಯದ ವಾತಾವರಣವಿದ್ದಾಗ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ವೈದ್ಯರು, ಹಲವು ತಜ್ಞರು… ವಿಜ್ಞಾನಿಗಳು ಕೋವಿಡ್‍ಗಾಗಿಲಸಿಕೆ ಕಂಡುಹಿಡಿದು ಸಕಾಲಕ್ಕೆ ಕೊಟ್ಟಿದ್ದು ಅಮೃತ ಘಳಿಗೆ ಎಂದು ಹೇಳಿದರು.
ಈ ಐದು ವರ್ಷ ನಮಗೆ ಕೋವಿಡ್ ಸಾಕಷ್ಟು ಅನುಭವ ನೀಡಿದೆ. ಒಂದು ಕಡೆ ಸತತ ಪ್ರವಾಹ, ಮತ್ತೊಂದು ಕಡೆ ಕೋವಿಡ್ ಮಾರಿ ಎದುರಾದವು ಆದರೂ ದೃತಿಗೆಡದೆ ಪರಿಸ್ಥಿತಿಯನ್ನು ನಿಭಾಯಿಸಿದ್ದೇವೆ. ಆರ್ಥಿಕ ಬೆಳವಣಿಗೆಯು ಉತ್ತಮವಾಗಿದೆ ಎಂದರು.
ಒಂದು ದೇಶ ಸ್ವಾತಂತ್ರ ಪಡೆಯುವುದು ಸುಲಭವಲ್ಲ ಮತ್ತು ನಂತರ ಅಭಿವೃದ್ಧಿಯಾಗುವುದು ಕೂಡ ಸುಲಭವಲ್ಲ. ಅಂಬೇಡ್ಕರ್, ಗಾಂೀಜಿ, ಮೊದಲ ಪ್ರಧಾನಿ ದೂರ ದೃಷ್ಟಿಯಿಂದ ಭಾರತಕ್ಕೆ ಒಂದು ಅಡಿಪಾಯ ಹಾಕಿದ್ದಾರೆ. ಅದರಲ್ಲೂ ಅಂಬೇಡ್ಕರ್ ಕೊಡುಗೆ ಸಾಕಷ್ಟು ಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಸಂವಿಧಾನ ಮೂಲಕ ದೇಶ ಅಭಿವೃದ್ಧಿ ಕಾರಣವಾಗಿದೆ. ಅದೇ ರೀತಿ ಕರ್ನಾಟಕ ಏಕೀಕರಣಕ್ಕೆ ಸಾಕಷ್ಟು ಜನ ಕೊಡುಗೆ ಕೊಟ್ಟಿದ್ದಾರೆ. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಕೊಡುಗೆ ಕೂಡ ಜಾಸ್ತಿ ಇದೆ ಎಂದು ಮೆಲುಕು ಹಾಕಿದರು.
ಕಾಂಗ್ರೆಸ್‌ನ ಯು.ಟಿ. ಖಾದರ್, ಜೆಡಿಎಸ್‌ನ ಬಂಡೆಪ್ಪ ಕಾಶಂಪೂರ್, ಹೆಚ್.ಕೆ. ಕುಮಾರಸ್ವಾಮಿ, ಸಾ.ರಾ. ಮಹೇಶ್ ಸೇರಿದಂತೆ ಹಲವು ಸದಸ್ಯರುಗಳು ವಿದಾಯ ಭಾಷಣದಲ್ಲಿ ಮಾತನಾಡಿದ್ದು, ಕೊನೆಯದಾಗಿ ಸಭಾಧ್ಯಕ್ಷರು ತಮ್ಮ ವಿದಾಯ ಭಾಷಣದಲ್ಲಿ ಎಲ್ಲರ ಸಹಕಾರ ನೆನೆದು ಶುಭ ಹಾರೈಸಿದರು.
15ನೇ ವಿಧಾನಸಭೆ ಅಂತ್ಯ – ಮತ್ತೆ ಗೆದ್ದು ಬರಲು ಶಾಸಕರ ಪಣ
Previous ArticleBJPಯಿಂದ ರಾಜ್ಯದ ಅಭಿವೃದ್ಧಿ- Congress ನಿಂದ ಭ್ರಷ್ಟಾಚಾರ
Next Article BPL ಕಾರ್ಡ್ ಗೆ 10 ಕಿಲೋ ಅಕ್ಕಿ Free