ಬೆಂಗಳೂರು,ಫೆ.27- ರಾಜಕಾರಣದಲ್ಲಿ ಸ್ನೇಹ, ಸಂಬಂಧಗಳಿಗೆ ಅವಕಾಶವೇ ಇಲ್ಲ.ಹೀಗೆಯೇ ರಾಜಕಾರಣದಲ್ಲಿ ಯಾರೂ ಕೂಡಾ ಶತೃಗಳೂ ಅಲ್ಲ,ಮಿತ್ರರೂ ಅಲ್ಲ.ಇಲ್ಲಿ ತಂದೆಯ ವಿರುದ್ಧ ಮಗ ಎದುರಾಳಿ, ಅಣ್ಣನ ವಿರುದ್ಧ ತಮ್ಮನ ಸ್ಪರ್ಧೆ ಹೀಗೆ ಹಲವಾರು ಉದಾಹರಣೆಗಳು ನೋಡ ಸಿಗುತ್ತವೆ.
ಈ ಬಾರಿಯ ಚುನಾವಣೆಯಲ್ಲಿ ಇಂತಹ ಹಲವು ಉದಾಹರಣೆಗಳು ನೋಡಲು ಸಿಗಬಹುದು
ರಾಜ್ಯ ರಾಜಕಾರಣದಲ್ಲಿ ಮಿತ್ರತ್ವಕ್ಕೆ ದೊಡ್ಡ ಹೆಸರು ವೀರೇಂದ್ರ ಪಾಟೀಲ್-ರಾಮಕೃಷ್ಣ ಹೆಗಡೆ. ಇವರನ್ನು ರಾಜಕಾರಣದ ಲವ-ಕುಶ ಎನ್ನುತ್ತಿದ್ದರು.ಇಂತಹದೇ ಮತ್ತೊಂದು ಉದಾಹರಣೆ ಮಲ್ಲಿಕಾರ್ಜುನ ಖರ್ಗೆ-ಧರ್ಮಸಿಂಗ ಅವರದ್ದು.
ತೀರಾ ಇತ್ತೀಚಿನ ಉದಾಹರಣೆ ಎಂದರೆ ಬಿ.ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರದ್ದು ಆದರೆ ಇದೀಗ ಈ ಇಬ್ಬರ ಸ್ನೇಹ ರಾಜಕಾರಣದ ಒಳಸುಳಿಗೆ ಸಿಲುಕಿ ಬಲಿಯಾಯಿತೇನೋ ಎಂಬಂತಹ ವಾತಾವರಣ ಸೃಷ್ಟಿಯಾಗತೊಡಗಿದೆ.
ಈ ಹಿಂದೆ ಬಿಜೆಪಿಗೆ ಗುಡ್ ಬೈ ಹೇಳಿದ ಶ್ರೀರಾಮುಲು ಪ್ರಾದೇಶಿಕ ಪಕ್ಷ ಕಟ್ಟಿದಾಗ ಜನಾರ್ದನ ರೆಡ್ಡಿ ಅವರಿಗೆ ಬೆಂಗಾವಲಾದರು.ತಾವು ಬಿಜೆಪಿಯಲ್ಲೇ ಇದ್ದರೂ ಆ ಪಕ್ಷದಿಂದ ಅಂತರ ಕಾಯ್ದುಕೊಂಡು ಸ್ನೇಹಿತನ ಪಕ್ಷಕ್ಕೆ ಸಹಕಾರ ನೀಡಿದ್ದು ಈಗ ಇತಿಹಾಸ. ಅಂದು ಜನಾರ್ದನ ರೆಡ್ಡಿ ಯಾವ ಪಕ್ಷದಿಂದಲೂ ಚುನಾವಣೆ ಎದುರಿಸಲಿಲ್ಲ ಎನ್ನುವುದು ಬೇರೆ ವಿಷಯ.
ಇದೀಗ ಕಾಲಚಕ್ರ ಉರುಳಿದೆ.ಬಿಜೆಪಿಗೆ ಜನಾರ್ದನ ರೆಡ್ಡಿ ಗುಡ್ ಬೈ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಎಂಬ ಪ್ರಾದೇಶಿಕ ಪಕ್ಷ ಕಟ್ಟಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಅವರ ಕೆಲವು ಬೆಂಬಲಿಗರು ಹೊಸ ಪಕ್ಷ ಸೇರಿದ್ದಾರೆ. ಇದೇ ರೀತಿಯಲ್ಲಿ ತಮ್ಮ ಜೀವದ ಗೆಳೆಯ ಶ್ರೀರಾಮುಲು ಕೂಡ ತಮ್ಮ ಪಕ್ಷ ಸೇರಬಹುದು ಎಂಬ ಜನಾರ್ದನ ರೆಡ್ಡಿ ಅವರ ನಿರೀಕ್ಷೆ ಹುಸಿಯಾಗಿದೆ .ಅಷ್ಟೇ ಅಲ್ಲ ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
ಅದೇನೆಂದರೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಂಸ್ಥಾಪಕ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ವಿರುದ್ದ ಭಾರತೀಯ ಜನತಾ ಪಾರ್ಟಿ ರೆಡ್ಡಿ ಆಪ್ತ ಸ್ನೇಹಿತ ಸಚಿವ ಬಿ. ಶ್ರೀರಾಮುಲು ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಜನಾರ್ದನರೆಡ್ಡಿ ಪಕ್ಷ ಸ್ಥಾಪನೆ ಮಾಡಿದ ಮೇಲೆ ಅವರ ಪಕ್ಷಕ್ಕೆ ಹೆಚ್ಚಿನದಾಗಿ ಬಿಜೆಪಿ ಕಾರ್ಯಕರ್ತರು, ಕೆಲ ಸಣ್ಣಪುಟ್ಟ ನಾಯಕರು ಸೇರುತ್ತಿದ್ದಾರೆ. ಇಷ್ಟರಿಂದಲೇ ಸಿಂಧನೂರು, ಕುಷ್ಟಿಗಿ, ಬಳ್ಳಾರಿ ನಗರ ಸೇರಿದಂತೆ ಕಲ್ಯಾಣ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಸಂಘಟನೆಗೆ ಕಿರಿ ಕಿರಿ ಆಗುತ್ತಿದೆ. ಅದಕ್ಕಾಗಿ ರೆಡ್ಡಿ ಅವರನ್ನು ಕಟ್ಟಿಹಾಕಲು ದಿಟ್ಟ ಕ್ರಮ ಆಗಬೇಕು ಎಂದು ರಾಜ್ಯ ಮಟ್ಟದ ಮುಖಂಡರ ಕೆಲ ದಿನಗಳ ಹಿಂದಿನ ಸಭೆಯಲ್ಲಿ ಒತ್ತಾಯ ಕೇಳಿ ಬಂದಿದೆ.ಹಾಗಾಗಿ ಒಂದು ಸ್ವತಃ ಜನಾರ್ದನರೆಡ್ಡಿ ಅವರನ್ನೇ ಕಟ್ಟಿ ಹಾಕಲು ಮತ್ತು ಅವರು ಇತರೇ ಕ್ಷೇತ್ರಗಳ ಕಡೆ ಗಮನ ಹರಿಸದಂತೆ ಒತ್ತಡಕ್ಕೆ ಸಿಲುಕಿಸಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕ ಅಮಿತ್ ಶಾ ಬಳ್ಳಾರಿ ಪ್ರವಾಸ ಕೈಗೊಂಡಿದ್ದ ವೇಳೆ ಈ ಬಗ್ಗೆ ಮಾತುಕತೆ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಜನಾರ್ದನ ರೆಡ್ಡಿ ಅವರನ್ನು ಕಟ್ಟಿಹಾಕಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿರುವ ಗಾಲಿ ಜನಾರ್ಧನರೆಡ್ಡಿ ವಿರುದ್ದ ಸಚಿವ ಶ್ರೀರಾಮುಲು ಅವರನ್ನು ಕಣಕ್ಕಿಳಿಸಲು ಪಕ್ಷ ಗಂಭೀರ ಚಿಂತನೆ ನಡೆಸಿದೆ.ಈ ರೀತಿಯಲ್ಲಿ ಮಾಡಿದರೆ,ಜನಾರ್ದನ ರೆಡ್ಡಿ ತಮ್ಮ ಹೆಚ್ಚಿನ ಸಮಯ ಗಂಗಾವತಿಯಲ್ಲೇ ಕಳೆಯಬೇಕಾಗುತ್ತದೆ.ಇಲ್ಲದೆ ಹೋದರೆ ಇತರ ಕ್ಷೇತ್ರಗಳಲ್ಲಿ ಪ್ರವಾಸ ಮಾಡುವ ಅವರು ಅಲ್ಲಿನ ಬಿಜೆಪಿ ಕಾರ್ಯಕರ್ತರನ್ನು ತಮ್ಮ ಪಕ್ಷದತ್ತ ಸೆಳೆಯುತ್ತಾರೆ ಇದರಿಂದ ಬಿಜೆಪಿಗೆ ಹಾನಿಯಾಗಲಿದೆ.ಅದರಲ್ಲೂ ಪ್ರಮುಖವಾಗಿ ಹೈದರಾಬಾದ್- ಕರ್ನಾಟಕ ಪ್ರದೇಶದಲ್ಲಿ ಇದರ ಹಾನಿ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ ಸಂಭಾವ್ಯ ಹಾನಿ ತಡೆಗಟ್ಟಲು ಅವರನ್ನು ಕಟ್ಟಿ ಹಾಕಬೇಕು ಅದಕ್ಕಾಗಿ ಶ್ರೀರಾಮುಲು ಅವರನ್ನು ತಮ್ಮ ಸ್ನೇಹಿತನ ವಿರುದ್ಧ ಕಣಕ್ಕಿಳಿಸಲು ಸಿದ್ದತೆ ನಡೆಸಿದೆ.
ಇದರ ಜೊತೆಗೆ ಶ್ರೀರಾಮುಲು ವಿಧಾನಸಭೆಗೆ ಹೆಚ್ಚು ಶ್ರಮವಿಲ್ಲದೆ ಆಯ್ಕೆಯಾಗಬಹುದಾದ ಕ್ಷೇತ್ರಗಳನ್ನು ಹುಡುಕಿದ್ದು,ಈ ಬಾರಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಬದಲಾಗಿ ಬಳ್ಳಾರಿ ಗ್ರಾಮೀಣ ಅಥವಾ ಸಂಡೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಆಯ್ಕೆ ನೀಡಿದೆ
ಹೀಗಾಗಿ ತಾನು ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿ ಅಲ್ಲಿ ತಮ್ಮ ಎದುರಾಳಿಯಾಗಿದ್ದ ತಿಪ್ಪೇಸ್ವಾಮಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಅವರಿಗೆ ಟಿಕೆಟ್ ಭರವಸೆ ನೀಡಲಾಗಿದೆ
ಇದೀಗ ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಇಲ್ಲವೇ ಸಂಡೂರು ಕ್ಷೇತ್ರದ ಜೊತೆ, ಜನಾರ್ದನರೆಡ್ಡಿ ವಿರುದ್ದ ಗಂಗಾವತಿಯಲ್ಲಿ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
Previous Articleಹಂದಿ ಹೊಡೆಯಲು ಹೋದವರು ವಾಪಸ್ ಬರಲೇ ಇಲ್ಲ
Next Article AAP ಗೆ ಭಾಸ್ಕರ್ ರಾವ್ ಗುಡ್ ಬೈ-BJP ಸೇರಲು ನಿರ್ಧಾರ