ಬೆಂಗಳೂರು – ಗುತ್ತಿಗೆ ಕಾರ್ಯಾದೇಶ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಬೆನ್ನಲ್ಲೇ ಇವರ ಮತ್ತಷ್ಟು ಅಕ್ರಮಗಳು ಬೆಳಕಿಗೆ ಬರತೊಡಗಿವೆ.
ಕೇವಲ ಪ್ರಶಾಂತ್ ಮಾಡಾಳು ಮಾತ್ರವಲ್ಲ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮತ್ತೊಬ್ಬ ಪುತ್ರ ಮಲ್ಲಿಕಾರ್ಜುನ ಮಾಡಾಳು ಕೂಡ ಇಂತಹ ಅಕ್ರಮದಲ್ಲಿ ನಿರತವಾಗಿರುವ ಅಂಶ ಬೆಳಕಿಗೆ ಬಂದಿದೆ.
ಲಂಚ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ತಂಡಕ್ಕೆ ಅದರ ಜೊತೆಗೆ ಮತ್ತೊಂದು ಅಕ್ರಮದ ಕೆಲವು ದಾಖಲೆಗಳು ಲಭ್ಯವಾಗಿವೆ. ಇದರಲ್ಲಿ ನೀರಾವರಿ ಇಲಾಖೆಗೆ ಸೇರಿದ ದಾಖಲೆಗಳು ಹೆಚ್ಚಿನ ಪ್ರಮಾಣದಲ್ಲಿವೆ ಅದರಲ್ಲೂ ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿಯಲ್ಲಿ ನೂರಾರು ಕೋಟಿ ರೂಪಾಯಿಗಳ ಅಕ್ರಮದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ.
ಶಾಸಕ ಮಾಡಾಳು ಅವರ ಮತ್ತೊಬ್ಬ ಪುತ್ರ ಮಲ್ಲಿಕಾರ್ಜುನ ಮಾಡಾಳು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಈ ಅಕ್ರಮದಲ್ಲಿ ಶಾಮೀಲಾಗಿರುವ ದಾಖಲೆಗಳು ಸಿಕ್ಕಿವೆ ಎನ್ನಲಾಗುತ್ತಿದೆ.
ಮಲ್ಲಿಕಾರ್ಜುನ ಗುಂಗೆ ಕಳೆದ 2017 ರಿಂದ ರಾಜ್ಯ
ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು ಶಾಸಕ ಮಾಡಾಳು ಪುತ್ರನೊಂದಿಗೆ ಸೇರಿ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳಷ್ಟು ಅಕ್ರಮವೆಸಗಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತ ಪೊಲೀಸರು ಮಾಡಾಳು ಅವರ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ ವೇಳೆ ಇವುಗಳ ಪತ್ತೆಯಾಗಿವೆ.ಆದರೆ ಇವುಗಳ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದು ,
ನೀರಾವರಿ ನಿಗಮದಲ್ಲಿ ನಕಲಿ ಬಿಲ್ ಸೃಷ್ಟಿಸಿ ಅಧಿಕಾರಿಗಳು, ಗುತ್ತಿಗೆದಾರರು ಹಣ ದುರ್ಬಳಕೆ ಮಾಡಿಕೊಂಡ ದಾಖಲೆಗಳು ಲೋಕಾಯುಕ್ತ ಪೊಲೀಸರನ್ನು ಬೆಚ್ಚಿ ಬೀಳಿಸಿವೆ.
ಈ ಅಕ್ರಮದ ಬಗ್ಗೆ ಹಿಂದೆಯೇ ವಿಶೇಷ ಆಡಿಟ್ ಗೆ ಒಳಪಡಿಸಿದ್ದು,ನೂರಾರು ಕೋಟಿ ಅಕ್ರಮ ಪತ್ತೆಯಾಗಿದೆ.ನೇರವಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೇ ಶಾಮೀಲಾಗಿರುವ ಈ ಪ್ರಕರಣದ ಬಗ್ಗೆ ಯಾವುದೇ ತನಿಖೆಗೆ ಆದೇಶಿಸದಿರುವುದು ಅಚ್ಚರಿ ಮೂಡಿಸಿದೆ.
ಜಲಸಂಪನ್ಮೂಲ ಇಲಾಖೆಗೆ ಪ್ರತಿ ಬಜೆಟ್‍ನಲ್ಲಿ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ಈ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಪ್ರಮುಖ ನಾಲೆ, ಕಾಲುವೆ, ಇನ್ನಿತರ ನೀರಾವರಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲಾಗುತ್ತದೆ. ಸರ್ಕಾರವೇ ಸಾವಿರಾರು ಕೋಟಿ ಸಾಲ ಮಾಡಿ ಕೊಡುತ್ತದೆ.
ಆದರೆ, ನಿಗಮಗಳಲ್ಲಿನ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಹಣ ದುರುಪಯೋಗ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
ಶಾಸಕ ಮಾಡಳು ವಿರೂಪಾಕ್ಷಪ್ಪ ಅವರ ಪುತ್ರ ಮಲ್ಲಿಕಾರ್ಜುನ ಮಾಡಾಳು ಅವರ ಕಚೇರಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಅಧಿಕೃತ ನಿವಾಸದ ಎದುರುಗಡೆಯೇ ಇದ್ದು, ಇದೊಂದು ರೀತಿಯಲ್ಲಿ ನೀರಾವರಿ ನಿಗಮದ ಬೇನಾಮಿ ಕಚೇರಿಯ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಚಿವರ ನಿವಾಸಕ್ಕೆ ಬರುವ ರೀತಿಯಲ್ಲಿ ಬಂದು ಈ ಬೇನಾಮಿ ಕಚೇರಿಯಲ್ಲಿ ಕುಳಿತು ಟೆಂಡರ್ ಪ್ರಕ್ರಿಯೆ ನಡೆಸುತ್ತಾರೆ. ಮಲ್ಲಿಕಾರ್ಜುನ ಮಾಡಾಳು ಅವರೊಂದಿಗೆ ಸೇರಿ ಕಾಮಗಾರಿ, ಗುತ್ತಿಗೆದಾರರನ್ನು ನಿಗದಿಪಡಿಸಿದ ನಂತರ ಕಾಮಗಾರಿಗೆ ಮೊತ್ತ ಅಂದಾಜಿಸಲಾಗುತ್ತದೆ ಆ ಬಳಿಕವಷ್ಟೇ ಟೆಂಡರ್. ಕರ್ನಾಟಕ ಪಾರದರ್ಶಕ ಕಾಯಿದೆ ಅನ್ವಯ ಟೆಂಡರ್ ಕರೆಯುವ ಪ್ರಾಧಿಕಾರ ತನ್ನ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಮಾಡುವ ಅಧಿಕಾರ ಹೊಂದಿದೆ. ಬಿಡ್ ಪೂರ್ವ ಸಭೆಯ ನಂತರ ಇದಕ್ಕೆ ಕಾಯಿದೆಯಲ್ಲಿ ಅವಕಾಶವಿದೆ.ಇದನ್ನು ಬಳಸಿಕೊಂಡ ವ್ಯವಸ್ಥಾಪಕ ನಿರ್ದೇಶಕರು ಮಾಡಾಳು ಮಲ್ಲಿಕಾರ್ಜುನ ಅವರೊಂದಿಗೆ ಸೇರಿ ಬಿಡ್ ಪೂರ್ವ ಸಭೆ ಹೆಸರಲ್ಲಿ ಅಕ್ರಮವೆಸಗುತ್ತಿದ್ದರು ಎನ್ನಲಾಗಿದೆ ಈ ರೀತಿಯಲ್ಲಿ ಸುಮಾರು ಎರಡು ಸಾವಿರ ಕೋಟಿ ಗೂ ಅಧಿಕ ಅಕ್ರಮವೆಸಗಿದ್ದು,ಇಲ್ಲಿಯವರೆಗೆ ಇದರ ಬಗ್ಗೆ ಪ್ರತಿಪಕ್ಷಗಳೂ ಯಾರೂ ಕೂಡ ಚಕಾರ ಎತ್ತದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಇದೊಂದು ಕಡೆಯಾದರೆ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಾರ್ಯ ವೈಖರಿ ಹಲವು ಅನುಮಾನಗಳಿಗೆ ಕಾರಣವಾಗಿದೆ.ಶಾಸಕರು ಸೇರಿ ಜನಪ್ರತಿನಿಧಿಗಳಿಗೆ ಯಾವುದೇ ಗೌರವ ನೀಡುವುದಿಲ್ಲ. ಇವರ ಭೇಟಿಗಾಗಿ ಶಾಸಕರು ತಾಸುಗಟ್ಟಲೆ ಇವರ ಕಚೇರಿ ಮುಂದೆ ಕಾಯಬೇಕು. ಆದರೆ ಇವರು ಮಾತ್ರ ಮಾಡಾಳು ಪುತ್ರನ ಕಚೇರಿಯಲ್ಲಿ ಠಳಾಯಿಸಿರುತ್ತಾರೆ ಎಂಬ ದೂರು ಸಾಮಾನ್ಯವಾಗಿದೆ.
ಬರುವ ಆಗಸ್ಟ್ ನಲ್ಲಿ ಸೇವೆಯಿಂದ ನಿವೃತ್ತರಾಗುತ್ತಿರುವ ನಿರ್ದೇಶಕರು ಅದಕ್ಕೂ ಮುನ್ನವೇ ಸರ್ಕಾರಿ ಉದ್ಯೋಗಕ್ಕೆ ಗುಡ್ ಬೈ ಹೇಳಿ ರಾಜಕಾರಣ ಪ್ರವೇಶದ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಮುಂಬರುವ ಚುನಾವಣೆಯಲ್ಲಿ ಅಖಾಡಕ್ಕಿಳಿದರೂ ಅಚ್ಚರಿಯಿಲ್ಲ.
ನೀರಾವರಿ ನಿಗಮ ಕೊರೆಯುತ್ತಿರುವ ಗುಂಗೆ-ಸಾವಿರಾರು ಕೋಟಿ ಗೋಲ್ ಮಾಲ್?
Previous ArticlePayCM ಫಲಾನುಭವಿ!
Next Article ಪ್ರವೀಣ್ ನೆಟ್ಟಾರು ಹಂತಕ ಬೆಂಗಳೂರಲ್ಲಿ ಸೆರೆಸಿಕ್ಕ