ದಲಾಯಿ ಲಾಮಾರ ಬಗ್ಗೆ ಆಕ್ರೋಶಗೊಂಡ ಜನ ಬೌದ್ಧ ಧರ್ಮಗುರು ದಲಾಯಿಲಾಮ ಅವರು ಆ ಧರ್ಮದ ಅನುಯಾಯಿಗಳ ಪರಮೋಚ್ಚ ಗುರು. ನೋಬೆಲ್ ಪ್ರಶಸ್ತಿ ವಿಜೇತರಾದ ಅವರು ತಮ್ಮ ಶಾಂತಿ ಸಂದೇಶಕ್ಕಾಗಿ ಪ್ರಸಿದ್ಧರಾಗಿರತಕ್ಕಂತವರು. ಬೌದ್ಧರಲ್ಲದವರೂ ಕೂಡ ದಲಾಯಿ ಲಾಮಾರವರ ಆಧ್ಯಾತ್ಮಿಕ ಸ್ಥಾನವನ್ನು ಗುರುತಿಸುತ್ತಾರೆ ಮತ್ತು ಅವರನ್ನು ಪೂಜ್ಯ ಭಾವದಿಂದ ನೋಡುತ್ತಾರೆ. ಅನೇಕ ಬಾರಿ ಅಸಂಬದ್ಧವಾಗಿ ಮಾತಾಡಿ ಪೇಚಿಗೆ ಸಿಲುಕಿಹಾಕಿಕೊಂಡಿರುವ ದಲಾಯಿ ಲಾಮರವರು ಕೆಲವೊಮ್ಮೆ ದೊಡ್ಡ ಮಟ್ಟದ ವಿವಾದಗಳನ್ನು ಮಾಡಿಕೊಂಡಿರುವವರು. ಆದರೆ ಅವರ ಇತ್ತೀಚಿನ ಒಂದು ಸಾರ್ವಜನಿಕ ನಡವಳಿಕೆ ಅನೇಕರನ್ನು ದಿಗ್ಭ್ರಮೆಗೊಳಿಸಿದೆ ಮಾತ್ರವಲ್ಲದೆ ಅನೇಕರಿಗೆ ಅವರ ಬಗ್ಗೆ ಅಸಹ್ಯ ಭಾವನೆ ಕೂಡ ಮೂಡುವಂತೆ ಮಾಡಿದೆ.
ಇತ್ತೀಚೆಗೆ ಒಂದು ಧಾರ್ಮಿಕ ಸನ್ನಿವೇಶದಲ್ಲಿ ದಲಾಯಿ ಲಾಮಾರವರ ಹತ್ತಿರಕ್ಕೆ ಬಂದ ಒಂದು ಪುಟ್ಟ ಬಾಲಕನಿಗೆ ಈ ಬೌದ್ಧ ಧರ್ಮಗುರು ಆ ಬಾಲಕನ ತುಟಿಗೆ ಮುತ್ತಿಟ್ಟಿದ್ದು ಮಾತ್ರವಲ್ಲದೆ ಅವರು ತಮ್ಮ ನಾಲಿಗೆಯನ್ನು ಹೊರಗೆ ಹಾಕಿ ‘ಬಾ ನನ್ನ ನಾಲಿಗೆಯನ್ನು ಚೀಪು’ ಎಂದು ಹೇಳಿ ಎಲ್ಲರನ್ನೂ ಆತಂಕಕ್ಕೆ ಈಡು ಮಾಡಿದ್ದಾರೆ. ಅವರು ಹೀಗೆ ಮಾಡಿದ್ದನ್ನು ನೋಡಿ ಕೆಲವರು ದಲಾಯಿ ಲಾಮರವರು ತಮಾಷೆಗಾಗಿ ಹೀಗೆ ಹೇಳಿದರು ಎಂದು ಸಮಜಾಯಿಸಿ ನೀಡುತ್ತಿದ್ದರೆ ಇನ್ನು ಬಹುತೇಕರು ಮಕ್ಕಳೊಂದಿಗೆ ಹೀಗೆ ತಮಾಷೆಗೂ ಮಾತನಾಡುವಂತಿಲ್ಲ ಮತ್ತು ಮಕ್ಕಳ ತುಟಿಗೆ ಮುತ್ತಿಡುವಂತಿಲ್ಲ ಮತ್ತು ಹಾಗೆ ಮಾಡಿದರೆ ಅದು ಅಕ್ಷಮ್ಯ ಅಪರಾಧ ಎಂದು ದೊಡ್ಡ ರೀತಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಲಾಯಿ ಲಾಮಾರವರ ಈ ಅಕ್ಷಮ್ಯ ನಡವಳಿಕೆ ಅನೇಕರಲ್ಲಿ ಈ ಬೌದ್ಧ ಧರ್ಮ ಗುರುವಿನ ಬಗ್ಗೆ ಅಸಹ್ಯ ಭಾವವನ್ನು ಮೂಡಿಸಿದೆ ಮತ್ತು ಇದು ವಿಶ್ವದಾದ್ಯಂತ ದಲಾಯಿ ಲಾಮರ ವಿರುದ್ಧ ಅಭಿಪ್ರಾಯ ಮೂಡಿಸಲು ದೊಡ್ಡ ವಿಷಯವಾಗಿ ಪರಿಣಮಿಸಬಹುದು. ಈ ವಿಷಯವನ್ನು ಚೀನಾ ದೇಶ ರಾಜಕೀಯ ವಾಗಿ ಬಳಸಿಕೊಂಡು ದಲಾಯಿ ಲಾಮಾರವರ ಸ್ಥಾನವನ್ನು ದುರ್ಬಲಗೊಳಿಸಿ ಟಿಬೆಟ್ ದೇಶದ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಬಹುದು ಎನ್ನಲಾಗಿದೆ.
