ಬೆಂಗಳೂರು,ಏ.21- ಚಲಿಸುತ್ತಿದ್ದ ಕಾರ್ ಮುಂಭಾಗದ ಮೇಲೆ ಗಾಲ್ಫ್ ಬಾಲ್ ಬಿದ್ದು ಗ್ಲಾಸ್ ಒಡೆದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಕೀಲರೊಬ್ಬರು ಈ ಸಂಬಂಧ ನೀಡಿದ ದೂರಿನ ಅನ್ವಯ ಪೊಲೀಸರು ಬೆಂಗಳೂರು ಗಾಲ್ಫ್ ಕ್ಲಬ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಸ್ಯಾಂಕಿ ರಸ್ತೆಯ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ ಬಳಿ ನಿನ್ನೆ ಬೆಳಗ್ಗೆ 10.30ರ ವೇಳೆ ತೆರಳುತ್ತಿದ್ದ ಕಾರ್ ಮೇಲೆ ಗಾಲ್ಫ್ ಬಾಲ್ ಬಿದ್ದು ಗ್ಲಾಸ್ ಒಡೆದಿದ್ದು ಮಾಲೀಕ, ವಕೀಲ ಗಿರೀಶ್ ಗಾಲ್ಫ್ ಕ್ಲಬ್ ಆಡಳಿ ಮಂಡಳಿ ಮತ್ತು ಆಟಗಾರನ ವಿರುದ್ಧ ದೂರು ದಾಖಲಿಸಿದ್ದಾರೆ
ಸ್ಯಾಂಕಿ ರಸ್ತೆಯಿಂದ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ ಕಡೆಗೆ ತೆರಳುತ್ತಿದ್ದೆ. ಗಾಲ್ಫ್ ಕ್ಲಬ್ನ ಒಳಭಾಗದಿಂದ ಬಂದ ಗಾಲ್ಫ್ ಬಾಲ್ ಕಾರಿನ ಮುಂಭಾಗದ ಗ್ಲಾಸ್ಗೆ ಜೋರಾಗಿ ಬಂದು ಹೊಡೆದಿದೆ. ಇದರಿಂದ ಗ್ಲಾಸ್ ಒಡೆದಿದೆ. ಜೊತೆಗೆ ಎಡಗೈ ಬೆರಳು ಗಾಯವಾಗಿದೆ.
ಅಜಾಗೃತೆಯಿಂದ ಕಾರ್ಗೆ ಹಾನಿಯುಂಟು ಮಾಡಲಾಗಿದೆ. ಪ್ರಾಣಕ್ಕೆ ಅಪಾಯವನ್ನುಂಟು ಮಾಡಿರುವ ಗಾಲ್ಫ್ ಕ್ಲಬ್ ಆಡಳಿತ ಅಧಿಕಾರಿಗಳು ಮತ್ತ ಆಟಗಾರರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ವಕೀಲ ಗಿರೀಶ್ ಮನವಿ ಮಾಡಿಕೊಂಡಿದ್ದಾರೆ.
ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣಾ, ಕಾವೇರಿ ನಿವಾಸಕ್ಕೆ ಗಾಲ್ಫ್ ಚೆಂಡು ಬಿದ್ದಿತ್ತು. ಪರಮೇಶ್ವರ್ ಡಿಸಿಎಂ ಆಗಿದ್ದಾಗ ಅವರ ಕಾರಿನ ಗಾಜು ಒಡೆದಿತ್ತು. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಎತ್ತರದ ನೆಟ್ ಅಳವಡಿಸಲಾಗಿತ್ತು.