ದಾವಣಗೆರೆ – ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಹೆಚ್ ಪಟೇಲ್ ಅವರ ಸ್ವ ಕ್ಷೇತ್ರ ಚೆನ್ನಗಿರಿ (Channagiri Assembly Constituency) ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದೆ ಅದಕ್ಕೆ ಪ್ರಮುಖ ಕಾರಣ ಲಂಚ ಆರೋಪದ ಸುಳಿಯಲ್ಲಿ ಸಿಲುಕಿದ ಹಾಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜೈಲು ಪಾಲಾದರೆ, ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ರಂಪ ರಾದ್ದಂತವಾಯಿತು.
ಇದರ ಪರಿಣಾಮವಾಗಿ ಕ್ಷೇತ್ರದ ಸ್ಪರ್ಧಾ ಕಣವೇ ವಿಚಿತ್ರ ಸ್ವರೂಪ ಪಡೆದುಕೊಂಡಿತು. ಸಾಮಾನ್ಯವಾಗಿ ಯಾವುದೇ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನ ಗಮನಿಸಿದರೆ ಹಾಲಿ ಶಾಸಕರ ವಿರುದ್ಧ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತವರು ಎದುರಾಳಿಯಾಗುತ್ತಾರೆ. ಆದರೆ ಚೆನ್ನಗಿರಿ ವಿಧಾನಸಭಾ ಕ್ಷೇತ್ರದ ಈ ಸಲದ ಕಣದಲ್ಲಿ ಹಾಲಿ, ಮಾಜಿ ಶಾಸಕರಾರೂ ಇಲ್ಲದೇ ಇರುವುದು ವಿಶೇಷ. ಪ್ರತೀ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಡುವ ಕ್ಷೇತ್ರದಲ್ಲಿ ಈ ಬಾರಿ ಆಖಾಡದಲ್ಲಿರುವ ಪ್ರಮುಖರೆಲ್ಲ ಮೊದಲ ಬಾರಿಗೆ ಶಾಸಕರಾಗುವ ಹಂಬಲದಲ್ಲಿರುವುದು ಗಮನಾರ್ಹವಾಗಿದೆ. (Channagiri Assembly Constituency)
ಕಾಂಗ್ರೆಸ್‌ನಿಂದ ಕಿಸಾನ್ ಘಟಕದ ಜಿಲ್ಲಾ ಅಧ್ಯಕ್ಷ ಬಸವರಾಜ್ ವಿ. ಶಿವಗಂಗಾ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಎದುರಿಸುತ್ತಿ ದ್ದಾರೆ. 2013ರಲ್ಲಿ ಸ್ಪರ್ಧಿಸಿ ಸೋತಿದ್ದ ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಬಿಜೆಪಿಯಿಂದ ಮತ್ತೂಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ.
ರಾಜ್ಯ ಕಬ್ಬು ಬೆಳೆ ಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಕಾಂಗ್ರೆಸ್ ಟಿಕೆಟ್ ಸಿಗದೆ ಕೊನೆಯ ಗಳಿಗೆಯಲ್ಲಿ ಜೆಡಿಎಸ್ ಹುರಿಯಾಳಾಗಿ ಕಣಕ್ಕಿಳಿದಿದ್ದಾರೆ.
ಇದರ ನಡುವೆ ಬಿಜೆಪಿ ನಾಯಕರ ಸಂಧಾನ ಮತ್ತು ಎಚ್ಚರಿಕೆಯ ನುಡಿಗಳಿಗೆ ಸೊಪ್ಪು ಹಾಕದೆ ಮಾಡಾಳು ಮಲ್ಲಿಕಾರ್ಜುನ್ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ನಾಯಕತ್ವಕ್ಕೆ ಸೆಡ್ಡು ಹೊಡೆದಿದ್ದಾರೆ. ಹೀಗಾಗಿ ಟಿಕೆಟ್ ವಂಚಿತ ಹಾಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅನಿವಾರ್ಯವಾಗಿ ಪಕ್ಷೇತರರಾಗಿ ನಿಂತಿರುವ ತಮ್ಮ ಮಗನ ಪರವಾಗಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. (Channagiri Assembly Constituency)
ಈ ಹಿನ್ನಲೆಯಲ್ಲಿ ಇಡೀ ಕ್ಷೇತ್ರವನ್ನು ಒಂದು ಸುತ್ತು ಹಾಕಿ ಬಂದರೆ ಚತುಷ್ಕೋನ ಸ್ಪರ್ಧೆ ಇರುವಂತೆ ಕಂಡುಬರುತ್ತದೆ. ಆದರೆ ಹಲವಾರು ಅಂಶಗಳನ್ನು ಲೆಕ್ಕಾಚಾರ ಹಾಕಿ ನೋಡಿದಾಗ ಸದ್ಯಕ್ಕೆಪಕ್ಷೇತರ ಅಭ್ಯರ್ಥಿ ಎಲ್ಲರಿಗಿಂತಲೂ ಮುಂದಿದ್ದಾರೆ ಎನ್ನಬಹುದು. ಆದರೆ ಕೊನೆಯ ಕ್ಷಣದಲ್ಲಿ ಲೆಕ್ಕಾಚಾರಗಳು ಏರುಪೇರಾಗಲಿವೆ.
ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಸಾದರ ಲಿಂಗಾಯತ ಸಮಾಜದವರೇ ಆಗಿದ್ದಾರೆ. ಬಂಡಾಯ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ್ ಸಹ ಅದೇ ಸಮುದಾಯದವರು. ಜೆಡಿಎಸ್‌ನ ತೇಜಸ್ವಿ ಪಟೇಲ್ ಪಂಚಮಸಾಲಿ ಸಮಾಜದವರು. ಕ್ಷೇತ್ರಾದ್ಯಂತ ವೀರಶೈವ ಸಮುದಾಯದ ಮತದಾರರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಮುಖ್ಯವಾಗಿ ಸಾದರ ಲಿಂಗಾಯತ ಸಮಾಜದವರ ಒಲವು ಗಳಿಸಿದವರು ಗೆಲ್ಲುತ್ತಾರೆ ಎಂಬ ಮಾತಿದೆ. ಕ್ಷೇತ್ರದಲ್ಲಿ ನಾಯಕರು, ಕುರುಬರು, ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾಕರು ಗಣನೀಯ ಸಂಖ್ಯೆಯಲ್ಲಿದ್ದು ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. (Channagiri Assembly Constituency)
ಕಾಂಗ್ರೆಸ್‌ನ ಬಸವರಾಜ್ ವಿ. ಶಿವಗಂಗಾ ಅವರಿಗೆ ಕೊರೊನಾ ವೇಳೆ ಮಾಡಿದ ಸಮಾಜಸೇವೆ, ಯುವ ಉತ್ಸಾಹಿ ಎನ್ನುವ ಅಂಶ ಸಾಕಷ್ಟು ಲಾಭ ತಂದು ಕೊಡುತ್ತಿದೆಯಾದರೂ ಕ್ಷೇತ್ರಕ್ಕೆ ಸಂಪೂರ್ಣ ಹೊಸಬರು ಹೊಸ ಸಂಪರ್ಕ ಹಾಗೂ ಟಿಕೆಟ್ ವಂಚಿತ ಸ್ವಪಕ್ಷೀಯರ ಅಸಮಾಧಾನ ಅದರಲ್ಲೂ ಪ್ರಮುಖವಾಗಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅವರ ಬೆಂಬಲಿಗರು ಅಷ್ಟಾಗಿ ಇವರನ್ನು ಇಷ್ಟಪಡುತ್ತಿಲ್ಲ ಎನ್ನುವುದು ದೊಡ್ಡ ಹಿನ್ನಡೆ ಎಂದು ಹೇಳಬಹುದು
ಬಿಜೆಪಿಯ ಎಚ್.ಎಸ್. ಶಿವಕುಮಾರ್ 2013ರಲ್ಲಿ ಸೋತ ಅನುಕಂಪದ ಲಾಭದ ಲೆಕ್ಕಾಚಾರದಲ್ಲಿದ್ದಾರೆ ಜೊತೆಗೆ ತಾವು ಸ್ಥಳೀಯರು ಹಾಗೂ ತುಮ್ಕೋಸ್ ಅಧ್ಯಕ್ಷರಾಗಿದ್ದು ರೈತರೊಂದಿಗೆ ಹೊಂದಿದ ಒಡನಾಟ ಅನುಕೂಲಕರ ಎಂದರೂ ಈ ಹಿಂದಿನ ಬಿಜೆಪಿ ಶಾಸಕ ಮಾಡಾಳು ಅವರ ಲಂಚ ಪ್ರಕರಣ ಹಾಗೂ ಅವರ ಕುಟುಂಬ ಸದಸ್ಯರು ಕಣದಲ್ಲಿ ಇರುವುದು ಇವರಿಗೆ ದೊಡ್ಡ ರೀತಿಯಲ್ಲಿ ಹಿನ್ನಡೆ ಆಗಬಹುದು ಎನ್ನಲಾಗಿದೆ. (Channagiri Assembly Constituency)
ಜೆಡಿಎಸ್ ಅಭ್ಯರ್ಥಿ ತೇಜಸ್ವಿ ಪಟೇಲ್‌ಗೆ ಜೆ.ಎಚ್. ಪಟೇಲರ ಕುಟುಂಬದ ಹಿನ್ನೆಲೆ, ರೈತಪರ ಹೋರಾಟ ಸಾಮಾಜಿಕ ಕಳಕಳಿ ಇವರ ಪರವಾಗಿ ಕೆಲಸ ಮಾಡುತ್ತಿದೆಯಾದರೂ ಕೊನೆ ಗಳಿಗೆಯಲ್ಲಿ ಜೆಡಿಎಸ್ ಸೇರಿದ್ದು ಇವರ ಆಪ್ತರಿಗೆ ಸರಿ ಕಾಣುತ್ತಿಲ್ಲ ಹೀಗಾಗಿ ಅವರೆಲ್ಲ ಇವರ ಪರವಾಗಿ ಮುಕ್ತವಾಗಿ ಕೆಲಸ ಮಾಡುತ್ತಿಲ್ಲ ಎನ್ನಲಾಗಿದೆ.
ಇನ್ನು ಪಕ್ಷೇತರರಾಗಿ ಕಣಕ್ಕಿಳಿದಿರುವ ಮಾಡಾಳು ಮಲ್ಲಿಕಾರ್ಜುನ್‌ಗೆ ತಂದೆ ಪ್ರಭಾವ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ .ಆದರೆ ಲಂಚ ಪ್ರಕರಣ ದೊಡ್ಡ ರೀತಿಯಲ್ಲಿ ಚರ್ಚೆಯಾಗುತ್ತಿದೆ ಇದಕ್ಕೆ ಅವರು ಬೇರೆ ರೀತಿಯಾದಂತ ಸಮಜಾಯಿಷಿ ಕೊಡುತ್ತಿದ್ದಾರೆ ಲಂಚ ಪ್ರಕರಣ ತಮ್ಮ ವಿರುದ್ಧ ಮಾಡಲಾದ ಪಿತೂರಿ ಇದಕ್ಕಾಗಿ ನಾವು ಬಲಿಪಶು ಗಳಾಗಿದ್ದೇವೆ ಎಂದು ಮತದಾರರ ಮುಂದೆ ಅಳಲು ತೋಡಿಕೊಳ್ಳುತ್ತಾ ಸಾಗುತ್ತಿದ್ದಾರೆ ಹೀಗಾಗಿ ಪ್ರಜ್ಞಾವಂತ ಮತದಾರ ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು.. (Channagiri Assembly Constituency)
Also read.