ಬೆಂಗಳೂರು,ಮೇ.5- ವಿಧಾನಸಭೆ ಚುನಾವಣೆ ಒಂದು ರೀತಿಯಲ್ಲಿ ಜಾತ್ರೆಯಂತೆ ನಡೆಯುತ್ತಿದೆ ಇಲ್ಲಿ ಉಂಡವನೇ ಜಾಣ ಎಂಬಂತಾಗಿದೆ ವಿದ್ಯಮಾನಗಳು ಮತದಾರರ ಓಲೈಕೆಗೆ ರಾಜಕೀಯ ನಾಯಕರು ಹಲವಾರು ಮಾರ್ಗ ಹಿಡಿದಿದ್ದು ಇದನ್ನೇ ಅನುಸರಿಸಿದ ಐನಾತಿ ವಂಚಕರು ಚಿನ್ನದ ವ್ಯಾಪಾರಿಯೊಬ್ಬರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ
ಬೆಂಗಳೂರಿನ ಕೆಆರ್ ಮಾರ್ಕೆಟ್ ಬಳಿಯ ಚಿನ್ನದ ವ್ಯಾಪಾರಿಯನ್ನು ಸಂಪರ್ಕಿಸಿದ ವಂಚಕರು ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಭಾವಿ ರಾಜಕಾರಣಿ ಒಬ್ಬರಿಗೆ ಮತದಾರರಿಗೆ ಹಂಚಲು ಚಿನ್ನದ ನಾಣ್ಯ ಮತ್ತು ಒಡವೆ ಬೇಕಿದೆ ಎಂದು ಹೇಳಿ ಆತನಿಂದ ಬರೋಬ್ಬರಿ 3 ಕೆಜಿ ಚಿನ್ನ ಮತ್ತು 80 ಲಕ್ಷ ಹಣ ವಂಚಿಸಿರುವ ಘಟನೆ ಇದಾಗಿದೆ.
ಸಿಟಿ ಮಾರ್ಕೆಟ್ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿಯನ್ನು ಹೊಂದಿರುವ ವಿಶಾಲ್ ಜೈನ್ ಎಂಬ ಉದ್ಯಮಿಯನ್ನು ಸಂಪರ್ಕಿಸಿದ ವಂಚಕರಾದ ಅಭಯ್, ಕಿರಣ್, ಸಂಕೇತ್, ನವೀನ್ ಹಾಗೂ ಚರಣ್ ಎಂಬ ವ್ಯಕ್ತಿಗಳು ತಮ್ಮ ನಾಯಕರಿಗೆ ಒಂದು ಕೆಜಿ ಚಿನ್ನ ಬೇಕು ಎಂದು ಪಡೆದಿದ್ದಾರೆ.
ಇದಾದ ಬಳಿಕ ಮತ್ತಷ್ಟು ಚಿನ್ನ ಬೇಕಿದೆ ಈ ಬಗ್ಗೆ ನಮ್ಮ ನಾಯಕರ ಜೊತೆ ಮಾತನಾಡಲು ಬನ್ನಿ ಎಂದು ವಿಶಾಲ್ ಜೈನ್ ಅವರನ್ನು ಶಾಂಗ್ರೀಲಾ ಹೋಟೆಲ್ ಗೆ ಕರೆದಿದ್ದಾರೆ ಅಲ್ಲಿ ಇವರು ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿ ಅವರನ್ನು ತಮ್ಮ ನಾಯಕರ ಪಿಎ ಎಂದು ಪರಿಚಯಿಸಿದ್ದಾರೆ ಆನಂತರ ಅವರ ಸೂಚನೆಯ ಮೇರೆಗೆ ಮತ್ತೆ ಒಂದು ಕೆಜಿ ಚಿನ್ನವನ್ನು ವಿಶಾಲ್ ಜೈನ್ ಅವರಿಂದ ಪಡೆದಿದ್ದಾರೆ.
ಹೀಗೆ ಹಂತ ಹಂತವಾಗಿ ಒಟ್ಟು ಮೂರು ಕೆಜಿಗೂ ಅಧಿಕ ಚಿನ್ನ ಪಡೆದಿದ್ದಾರೆ. ಕೊನೆಗೆ ಹಣ ಕೇಳಿದಾಗ, ನಮ್ಮ ಬಳಿ 8 ಕೆಜಿ ಚಿನ್ನದ ಗಟ್ಟಿ ಇದೆ. ಅದನ್ನು ತೆಗೆದುಕೊಂಡು ಉಳಿದ ಹಣ ವಾಪಸ್ಸು ಕೊಡಿ ಎಂದಿದ್ದಾರೆ.
ಇದನ್ನು ನಂಬಿ ಎಂಟು ಕೆಜಿ ಪಡೆದು ಐವತ್ತು ಲಕ್ಷ ಹಣ ವಾಪಸ್ಸು ನೀಡಿದ್ದರು. ಬಳಿಕ ಮನೆಗೆ ಬಂದು ನೋಡಿದಾಗ ಅದು ನಕಲಿ ಚಿನ್ನ ಎನ್ನುವುದು ಗೊತ್ತಾಗಿದೆ. ಕೂಡಲೇ ಅವರನ್ನು ಸಂಪರ್ಕಿಸಿದ ಉದ್ಯಮಿ ನೀವು ಕೊಟ್ಟಿರುವುದು ಅಸಲಿ ಚಿನ್ನ ಅಲ್ಲ ಇದು ಸಂಪೂರ್ಣ ನಕಲಿ ನನಗೇಕೆ ಹೀಗೆ ಮೋಸ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆದರೆ ಆ ಐನಾತಿಗಳು ನಾವು ನಿಮಗೆ ಕೊಟ್ಟಿದ್ದು ಅಸಲಿ ಚಿನ್ನ ಅದನ್ನು ನೀವು ಪರಿಶೀಲಿಸಿ ತೆಗೆದುಕೊಂಡು ಹೋಗಿದ್ದೀರಿ ಈಗ ಅದನ್ನು ಬದಲಾಯಿಸಿ ನಕಲಿ ಚಿನ್ನ ಕೊಟ್ಟಿದ್ದೇವೆ ಎಂದು ಆರೋಪಿಸುತ್ತಿದ್ದೀರಿ ಎಂದು ಹೇಳಿದ್ದಾರೆ.
ಈ ವಿಷಯವಾಗಿ ಅವರ ನಡುವೆ ಮಾತಿನ ಚಕಮಕಿ ನಡೆದಿದ್ದು ಇದೀಗ ಉದ್ಯಮಿ ತಮಗಾದ ವಂಚನೆಯ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಸಂಬಂಧಿಸಿದಂತೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಅರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
Previous Articleಚನ್ನಗಿರಿ ಕ್ಷೇತ್ರ-ಬಿಜೆಪಿಯ ಗೆಲುವಿನ ಹಾದಿಯಲ್ಲಿ ಕಂದಕವಾದ ಪಕ್ಷೇತರ | Channagiri Assembly Constituency
Next Article ರಾಹುಲ್ ಗಾಂಧಿ-ಕುಮಾರಸ್ವಾಮಿ ಮಾಡಿದ್ದರೆ?