ಬೆಂಗಳೂರು, ಮೇ 11- ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು ಎಲೆಕ್ಟ್ರಾನಿಕ್ ಮತ ಯಂತ್ರಗಳು ಸ್ಟ್ರಾಂಗ್ ರೂಮ್ ನಲ್ಲಿ ಭದ್ರವಾಗಿದ್ದರೆ, ಎಲ್ಲೆಡೆ ಸೋಲು ಗೆಲುವಿನ ಲೆಕ್ಕಾಚಾರ ನಡೆದಿದ್ದು, ಬೆಟ್ಟಿಂಗ್ ಭರಾಟೆಯು ಜೋರಾಗಿದೆ.
ಮಂಡ್ಯ ಬೆಳಗಾವಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎಂದು ಗುಪ್ತದಳ ಮೂಲಗಳು ತಿಳಿಸಿವೆ.
ಮತಗಟ್ಟೆ ಸಮೀಕ್ಷೆ ಆಧರಿಸಿ ಯಾವ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ವಿಷಯದ ಕುರಿತು ಹೆಚ್ಚಿನ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿದ್ದರೆ ಕೆಲವು ಕಡೆ ಕ್ಷೇತ್ರವಾರು ಯಾರು ಗೆಲ್ಲಲಿದ್ದಾರೆ ಎಂಬ ವಿಷಯವಾಗಿ ಬೆಟ್ಟಿಂಗ್ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಈ ಬೆಟ್ಟಿಂಗ್ ನಲ್ಲಿ ಕೇವಲ ಹಣ ಮಾತ್ರವಲ್ಲದೆ ಮನೆ ಜಮೀನು ಒಡವೆ ವಾಹನ ಕುರಿ ಮೇಕೆ ಟ್ರಾಕ್ಟರ್ ಗಳನ್ನು ಬಳಸಲಾಗಿದೆ ಎಂಬ ವರದಿಗಳಿವೆ ಇದರಿಂದ ಕಾನೂನು ವ್ಯವಸ್ಥೆಗೆ ಭಂಗ ಉಂಟಾಗಲಿದೆ ಎಂದು ತಿಳಿದಿರುವ ಪೊಲೀಸರು ಕೆಲವು ಸಾಂಪ್ರದಾಯಿಕ ಬೆಟ್ಟಿಂಗ್ ಅಡ್ಡಗಳು ಮತ್ತು ಕುಳಗಳ ಮೇಲೆ ನಿಗಾ ವಹಿಸಿದ್ದಾರೆ.
ಬೆಟ್ಟಿಂಗ್ ನಿಗ್ರಹಿಸುವ ದೃಷ್ಟಿಯಿಂದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಪೋಲಿಸ್ ಮಾಹಿತಿದಾರರ ಸಂಖ್ಯೆಯನ್ನು ಹೆಚ್ಚಿಸಿದ್ದು ಎಲ್ಲೆಡೆ ಖಾಕಿಪಡೆ ತೀವ್ರ ನಿಗಾವಹಿಸಿದ್ದಾರೆ.
ಈ ನಡುವೆ,ಎಲ್ಲ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ ಬಹುಮತದ ಸನಿಹ ಬಂದಿದೆ ಎಂದು ಭವಿಷ್ಯ ನುಡಿದಿದ್ದರೆ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು, ಬಿಜೆಪಿ 31 ಸಾವಿರ ಬೂತ್‌ಗಳಲ್ಲಿ ಮುನ್ನಡೆ ಸಾಧಿಸುವುದು ನಿಶ್ಚಿತ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಖ್ಯಾತ ಸಮೀಕ್ಷಾ ಸಂಸ್ಥೆಗಳು 2014 ರಲ್ಲಿ 282 ಅಥವಾ 2019 ರಲ್ಲಿ 303 ಸೀಟುಗಳು, 2022 ರಲ್ಲಿ 156 ಬರುತ್ತವೆ ಎಂದು ಭವಿಷ್ಯ ನುಡಿದಿರಲಿಲ್ಲ. 2018 ರಲ್ಲಿ 104 ಬರುತ್ತವೆ ಎಂದೂ ಹೇಳಿರಲಿಲ್ಲ.
2018 ರಲ್ಲಿ 24 ಸಾವಿರ ಬೂತ್‌ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಈ ಬಾರಿ 31 ಸಾವಿರ ಬೂತ್‌ಗಳಲ್ಲಿ ನಾವು ಮುನ್ನಡೆ ಸಾಧಿಸಲಿದ್ದೇವೆ. ಸಂಖ್ಯೆ ಎಷ್ಟು ಎಂದು ನೀವೇ ಊಹಿಸಿ’ ಎಂದು ಹೇಳಿದ್ದಾರೆ.
‘ಪ್ರಭು ಶ್ರೀರಾಮನಿಗಾಗಿ ರಾಮನ ಸೇನೆ ಯುದ್ಧವನ್ನು ಗೆದ್ದಂತೆ, ಮೋದಿಯವರಿಗಾಗಿ ಬೂತ್ ಸಮಿತಿ ಕಾರ್ಯಕರ್ತರು ಮತ್ತು ಪೇಜ್ ಪ್ರಮುಖರು ಚುನಾವಣೆ ಎಂಬ ಯುದ್ಧದಲ್ಲಿ ಪ್ರತಿ ಬೂತ್‌ನಲ್ಲೂ ಗೆಲ್ಲಲಿದ್ದಾರೆ ಬಿಜೆಪಿಗೆ ಪೂರ್ಣ ಬಹುಮತ ಸಿಗಲಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸಂಘ ಪರಿವಾರದ ಪ್ರಭಾವಿ ನಾಯಕನಾಗಿದ್ದು ತಮ್ಮದೇ ಆದ ನೆಟ್ವರ್ಕ್ ಹೊಂದಿರುವ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮಾಡಿರುವ ಈ ಟ್ವೀಟ್ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
Previous Articleಮೂರನೇ ಸ್ಥಾನಕ್ಕೆ ಕುಸಿದ Public TV ರೇಟಿಂಗ್
Next Article DK ಶಿವಕುಮಾರ್ ಮುಖ್ಯಮಂತ್ರಿ-ಮೂಲ ಕಾಂಗ್ರೆಸಿಗರ ಲಾಬಿ