ಬೆಂಗಳೂರು, ಮೇ 12- ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ಫಲಿತಾಂಶದ ಕುರಿತು ಲೆಕ್ಕಾಚಾರ ನಡೆಯುತ್ತಿರುವಾಗಲೇ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬ ಕುರಿತು ಚರ್ಚೆ ಆರಂಭವಾಗಿದೆ.
ಮತಗಟ್ಟೆ ಸಮೀಕ್ಷೆ ಮತ್ತು ಪಕ್ಷದ ಆಂತರಿಕ ಸಮೀಕ್ಷೆಗಳು ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಸಿಎಂ ಹುದ್ದೆ ಕುರಿತು ಲಾಬಿ ಮತ್ತು ಚರ್ಚೆಗಳು ದೊಡ್ಡ ಪ್ರಮಾಣದಲ್ಲಿ ನಡೆದಿವೆ.
ಪಕ್ಷದ ಮೂಲ ಕಾರ್ಯಕರ್ತರು ಮತ್ತು ನಾಯಕರು ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗೆಲುವಾಗಿದೆ. ಪಕ್ಷ ಅತ್ಯಂತ ಸಂಕಷ್ಟದ ಸಮಯದಲ್ಲಿದ್ದಾಗ ನಾಯಕತ್ವ ವಹಿಸಿಕೊಂಡು ಸಂಘಟನೆಯಲ್ಲಿ ಹೊಸ ಉತ್ಸಾಹ ಮೂಡುವಂತೆ ಮಾಡಿದ್ದಾರೆ ಹೀಗಾಗಿ ಅವರಿಗೆ ತಕ್ಕ ಪ್ರತಿಫಲ ಸಿಗಬೇಕು ಎಂಬ ವಾದ ಮಂಡಿಸುತ್ತಿದ್ದಾರೆ.
ಸಾಮಾನ್ಯವಾಗಿ ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆಯ ವಿಷಯ ಬಂದಾಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಯಾರು ಪಕ್ಷವನ್ನು ಮುನ್ನಡೆಸಿ ಅಧಿಕಾರಕ್ಕೆ ತಂದಿರುತ್ತಾರೋ ಅವರಿಗೆ ಅವಕಾಶ ನೀಡುತ್ತಾ ಬಂದಿದೆ. ಇದು ಪಕ್ಷದ ಪರಂಪರಾಗತ ನಿಲುವಾಗಿದೆ ಎಂದು ಕಾಂಗ್ರೆಸ್ಸಿನ ಮೂಲ ಕಾರ್ಯಕರ್ತರು ಹೇಳುತ್ತಿದ್ದಾರೆ.
ರಾಜ್ಯದಲ್ಲಿ 1999 ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷ ನಾಯಕರಾಗಿದ್ದರು ಆಗ ಕೆಪಿಸಿಸಿ ಅಧ್ಯಕ್ಷರಾಗಿ ಎಸ್ಎಂ ಕೃಷ್ಣ ಪಕ್ಷವನ್ನು ಮುನ್ನಡೆಸಿದ್ದರು. ಈ ವೇಳೆ ಪಕ್ಷ ಅಧಿಕಾರಕ್ಕೆ ಬಂದು ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾದರು. ಇದೇ ಮಾನದಂಡವನ್ನು ನೆರೆಯ ಆಂಧ್ರ ಮತ್ತು ಮಹಾರಾಷ್ಟ್ರದಲ್ಲೂ ಅನುಸರಿಸಲಾಗಿತ್ತು ಇತ್ತೀಚೆಗೆ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲೂ ಇದೇ ಮಾನದಂಡವನ್ನು ಅನುಸರಿಸಲಾಗಿದೆ.
ಹೀಗಾಗಿ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ, ಮುಖ್ಯಮಂತ್ರಿ ಆಗಬೇಕು ಎಂದು ವಾದ ಮಂಡಿಸುತ್ತಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಿಧಾನಸಭೆಯ ಪ್ರತಿ ಪಕ್ಷ ನಾಯಕ ಬಿಕೆ ಹರಿಪ್ರಸಾದ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಚ್ ಕೆ ಪಾಟೀಲ್ ಸೇರಿದಂತೆ ಹಲವಾರು ನಾಯಕರು ಇದೀಗ ಡಿಕೆ ಶಿವಕುಮಾರ್ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿರುವ ಎಲ್ಲ ನಾಯಕರು ಮುಖ್ಯಮಂತ್ರಿ ಹುದ್ದೆ ನ್ಯಾಯಯುತವಾಗಿ ಡಿಕೆ ಶಿವಕುಮಾರ್ ಅವರಿಗೆ ಸಿಗಬೇಕು ಎಂಬ ಅಭಿಪ್ರಾಯ ಹೇಳಿ ಶಿವಕುಮಾರ್ ಅವರಿಗೆ ಉನ್ನತ ದೊರಕಿಸಿ ಕೊಡುವಂತೆ ಮನವಿ ಮಾಡಿರುವುದಾಗಿ ಗೊತ್ತಾಗಿದೆ.
ನನಗೆ ಆಶೀರ್ವಾದ-
ಎಲ್ಲಾ ಬೆಳವಣಿಗೆಗಳ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಾವು ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ದಿನದಿಂದ ನಿದ್ದೆ ಮಾಡದೆ ಶ್ರಮ ಪಟ್ಟು ಕೆಲಸ ಮಾಡಿದ್ದೇನೆ. ಅದಕ್ಕಾಗಿ ಹಿರಿಯರು-ಕಿರಿಯರು ಸೇರಿದಂತೆ ಎಲ್ಲರೂ ನನಗೆ ಆಶೀರ್ವಾದ ಮಾಡುತ್ತಾರೆ, ಕಾಂಗ್ರೆಸ್ ಉತ್ತಮ ಸರ್ಕಾರ ನೀಡಲಿದೆ ಎಂದು ಹೇಳಿದ್ದಾರೆ.
ಹಿಂದೆ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ತಮ್ಮಿಂದ ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿದ್ದರು. ಉಪಚುನಾವಣೆಯ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಅಂತಹ ಸಂದರ್ಭದಲ್ಲಿ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ನನಗೆ ಜವಾಬ್ದಾರಿ ನೀಡಿದರು. ಅಂದಿನಿಂದ ನಾನು ನಿದ್ದೆ ಮಾಡಿಲ್ಲ, ಪಕ್ಷದ ಕಾರ್ಯಕರ್ತರಿಗೆ ನಿದ್ದೆ ಮಾಡಲು ಬಿಡದೆ ಕೆಲಸ ಮಾಡಿದ್ದೇನೆ. ಶ್ರಮ ಪಟ್ಟಿದ್ದೇನೆ ಎಂದಿದ್ದಾರೆ.
ಪಕ್ಷಕ್ಕೆ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಯಾವ ಸಂದರ್ಭದಲ್ಲೂ ತಪ್ಪಾಗುವುದಿಲ್ಲ ಎಂದು ಭಾವಿಸಿದ್ದೇನೆ, ಎಲ್ಲರೂ ಸಹಕಾರ ಕೊಡುತ್ತಾರೆ. ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಆಶಿರ್ವಾದ ಮಾಡುತ್ತಾರೆ. ಕಾಂಗ್ರೆಸ್ ಉತ್ತಮ ಸರ್ಕಾರ ನೀಡಲಿದೆ ಎಂದು ಹೇಳಿದ್ದಾರೆ.
ಫಲಿತಾಂಶದ ಬಳಿಕ ಕಾಂಗ್ರೆಸ್ ರೆಸಾರ್ಟ್ ರಾಜಕಾರಣ ಮಾಡಲಿದೆ ಎಂಬ ವದ್ಧಂತಿಗಳು ಸರಿಯಲ್ಲ, ರೆಸಾರ್ಟ್ ರಾಜಕಾರಣ 25 ವರ್ಷದ ಹಿಂದೆಯೇ ಮುಗಿದು ಹೋಗಿದೆ. ರಾಜಕೀಯ ಪಕ್ಷಗಳು ತಮ್ಮೆಲ್ಲಾ ಶಾಸಕರನ್ನು ಒಂದೆಡೆ ಸೇರಿಸಿಕೊಳ್ಳುವುದು ಸಾಮಾನ್ಯ. ಕಾಂಗ್ರೆಸ್ ಮಾತ್ರವಲ್ಲ ಎಲ್ಲಾ ಪಕ್ಷಗಳು ಇದನ್ನೇ ಮಾಡುತ್ತವೆ. ಒಂದೆಡೆ ಸೇರಿ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ರೆಸಾರ್ಟ್ ರಾಜಕೀಯದ ಸುಳಿವು ನೀಡಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನಮಗೆ ನಂಬಿಕೆ ಇಲ್ಲ. ಮಾಧ್ಯಮದವರು ಸಂಗ್ರಹಿಸಿದ ಸ್ಯಾಂಪಲ್ ಸೈಜ್ ಚಿಕ್ಕದಿದೆ. ಎರಡು-ಮೂರು ಟಿವಿಗಳಲ್ಲಿ ಮುಂಚಿತವಾಗಿ ಚುನಾವಣೋತ್ತರ ಸಮೀಕ್ಷೆಗಳನ್ನು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಅದರಲ್ಲಿ ಕಾಂಗ್ರೆಸ್‍ಗೆ ಹೆಚ್ಚು ಸ್ಥಾನ ನೀಡಲಾಗಿತ್ತು. ಕೆಲವೇ ಗಂಟೆಗಳಲ್ಲಿ ಬದಲಾವಣೆ ಮಾಡಿ, ಕಡಿಮೆ ಸ್ಥಾನ ನೀಡಿದ್ದನ್ನು ನಾನು ಗಮನಿಸಿದ್ದೇನೆ. ಅದೆಲ್ಲಾ ಏನೇ ಇದ್ದರೂ ನಾನು ನಮಗಿರುವ ಮಾಹಿತಿಯನ್ನು ನಂಬುತ್ತೇನೆ. ನನ್ನ ವರದಿಯ ಪ್ರಕಾರ ಕಾಂಗ್ರೆಸ್ 141 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದರು.
ಯಾರು ಎಷ್ಟೆ ದುಡ್ಡು ಸುರಿದಿರಬಹುದು, ಎಷ್ಟೇ ದೊಡ್ಡ ನಾಯಕರು ಬಂದು ಪ್ರಚಾರ ಮಾಡಿರಬಹುದು. ಆದರೆ ಜನ ಹಣಕ್ಕೆ ಬೆಲೆ ನೀಡಿಲ್ಲ. ಶೇ.40ರಷ್ಟು ಕಮಿಷನ್ ಭ್ರಷ್ಟಚಾರ ಹಾಗೂ ಡಬ್ಬಲ್ ಇಂಜಿನ್ ಸರ್ಕಾರವನ್ನು ನೋಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ನಿಶ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
DK ಶಿವಕುಮಾರ್ ಮುಖ್ಯಮಂತ್ರಿ-ಮೂಲ ಕಾಂಗ್ರೆಸಿಗರ ಲಾಬಿ
Previous Articleಸೋಲು ಗೆಲುವಿನ ಬೆಟ್ಟಿಂಗ್ ಲೆಕ್ಕಾಚಾರ
Next Article Karnataka Election – ಫಲಿತಾಂಶ ವಿಶ್ಲೇಷಣೆ