ಬೆಂಗಳೂರು – ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಕಳೆದ ಮೂರು ದಿನಗಳಿಂದ ಉಂಟಾಗಿದ್ದ ಬಿಕ್ಕಟ್ಟು ಕೊನೆಗೂ ಬಗೆಹರಿದಿದೆ. ಹಲವು ಸುತ್ತಿನ ರಾಜಿ ಸಂಧಾನದ ಬಳಿಕ ಮೊದಲ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಸಮ್ಮತಿಸಿದ ಡಿಕೆ ಶಿವಕುಮಾರ್ ಇದಕ್ಕಾಗಿ ಷರತ್ತು ವಿಧಿಸಿದ್ದಾರೆ.
ಎರಡೂವರೆ ವರ್ಷಗಳ ಬಳಿಕ ಅಧಿಕಾರ ಬಿಟ್ಟುಕೊಡುವ ವಾಗ್ದಾನವನ್ನು ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಡಬೇಕು ಎಂಬುದು ಡಿ.ಕೆ ಶಿವಕುಮಾರ್ ಅವರ ಷರತ್ತು ಇದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಸರಣಿ ಸಭೆಗಳು ನಡೆದವು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಮ್ಮ ನಿಲುವುಗಳಿಗೆ ಬಿಗಿಯಾಗಿ ಅಂಟಿಕೊಂಡ ಪರಿಣಾಮ ಬಿಕ್ಕಟ್ಟಿನ ವಾತಾವರಣ ಸೃಷ್ಟಿಯಾಗಿತ್ತು.
ಅಂತಿಮವಾಗಿ ಕಳೆದ ರಾತ್ರಿ, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಜತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮಾತುಕತೆ ನಡೆಸಿ, ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಂಡರು. ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ, ನಿರ್ಧಾರಕ್ಕೆ ಒಪ್ಪಿಗೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ತಲಾ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಗೆ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಅಧಿಕಾರ ನಡೆಸಲಿದ್ದಾರೆ. ನಂತರದ ಅವಧಿಗೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ.
ಅಧಿಕಾರ ಹಂಚಿಕೆ ಮತ್ತು ಇತರ ವಿಷಯಗಳಲ್ಲಿ ಒಮ್ಮತಕ್ಕೆ ಬರುವ ಸಲುವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಇಂದಿರಾ ಭವನದಲ್ಲಿ ಸಂಜೆ 7 ಗಂಟೆಗೆ ಸಭೆ ನಡೆಯುತ್ತಿದ್ದು, ನೂತನ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಜರಿರಬೇಕಾಗಿ ಸೂಚಿಸಿದ್ದಾರೆ.
ಈ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಯಾಗಿ ಆಯ್ಕೆ ಮಾಡಿರುವ ನಿರ್ಧಾರ ಪ್ರಕಟಿಸಲಾಗುವುದು ನಂತರ ಸಿದ್ದರಾಮಯ್ಯ ಎರಡುವರೆ ವರ್ಷಗಳ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿ ಬಳಿಕ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರದ ಘೋಷಣೆ ಮಾಡಲಿದ್ದಾರೆ ನಂತರ ಶಾಸಕರ ನಿಯೋಗ ರಾಜಭವನಕ್ಕೆ ತೆರಳಿ ಶಾಸಕಾಂಗ ನಾಯಕನ ಆಯ್ಕೆ ವಿಚಾರದ ಬಗ್ಗೆ ಪತ್ರ ನೀಡಿ ಪ್ರಮಾಣವಚನ ಸ್ವೀಕಾರ ಸಮಾರಂಭ ಆಯೋಜಿಸಲು ಮನವಿ ಮಾಡಲಿದೆ.
ಉನ್ನತ ಮೂಲಗಳ ಪ್ರಕಾರ ಶನಿವಾರ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು ಇದಕ್ಕಾಗಿ ಈಗಾಗಲೇ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧತೆಗಳು ನಡೆದಿದೆ.
Previous Articleಪರಮೇಶ್ವರ್ ಆಗುತ್ತಾರಂತೆ CM!
Next Article ಅಬ್ಬಾ, ಸಮೀರ್ ವಾಂಖಡೆ ಬಳಿ ಎಷ್ಟೊಂದು ಆಸ್ತಿ!