ಬೆಂಗಳೂರು,ಮೇ.21- ರಾಜಧಾನಿ ಮಹಾನಗರಿ ಬೆಂಗಳೂರಿನ ಬನಶಂಕರಿ, ಜಯನಗರ ಸೇರಿದಂತೆ ನಗರದ ದಕ್ಷಿಣ ಭಾಗಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸುತ್ತ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಕುಖ್ಯಾತ ರೌಡಿ ಬಾಬು ಅಲಿಯಾಸ್ ಅಲ್ಯೂಮಿನಿಯಂ ಬಾಬು ಶವ ತಮಿಳುನಾಡಿನ ತಳಿ – ಡೆಂಕಣಿಕೋಟೆ ಬಳಿಯ ಅರಣ್ಯದಲ್ಲಿ ಪತ್ತೆಯಾಗಿದೆ.
ಪ್ಲಾಸ್ಟಿಕ್ ಚೀಲದಲ್ಲಿ ಅರೆ-ಬರೆ ಸುಟ್ಟ ಸ್ಥಿತಿಯಲ್ಲಿ ಅಲ್ಯೂಮಿನಿಯಂ ಬಾಬು ಶವವನ್ನು ತಾಳೆ ಗಿಡದ ಪೊದೆಯಲ್ಲಿ ಬಚ್ಚಿಟ್ಟು ಕೊಲೆಗಾರರು ಪರಾರಿಯಾಗಿದ್ದಾರೆ.
ಜಯನಗರ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ಬಾಬು
ಕೊಲೆ, ಸುಲಿಗೆ, ಬೆದರಿಕೆ, ದರೋಡೆ ಸೇರಿ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರೆ,ಎದುರಾಳಿ ಬಣಗಳೂ ಕೂಡಾ ಈತನಿಗೆ ಸ್ಕೆಚ್ ಹಾಕಿದ್ದವು ಎನ್ನಲಾಗಿದೆ ಹೀಗಾಗಿ ಈತ ಇತ್ತೀಚೆಗೆ ಬೆಂಗಳೂರಿನಿಂದ ತಮಿಳುನಾಡಿಗೆ ವಾಸ್ತವ್ಯ ಬದಲಿಸಿದ್ದ.
ನಗರದ ಪಾತಕ ಲೋಕದ ಅರಸಯ್ಯ – ಜಲ್ಲಿ ವೆಂಕಟೇಶ್ ಸಿಂಡಿಕೇಟ್ನಲ್ಲಿ ಗುರುತಿಸಿಕೊಂಡಿದ್ದ ಬಾಬು ಅಲ್ಯೂಮಿನಿಯಂ ರೌಡಿ ಎಂದೇ ಕುಖ್ಯಾತಿ ಪಡೆದಿದ್ದ. ಈಗ ಅರಸಯ್ಯ-ಜಲ್ಲಿ ವೆಂಕಟೇಶ್ ಇಲ್ಲವಾಗಿದ್ದರಿಂದ ಐದಾರು ವರ್ಷಗಳಿಂದ ಕೊತ್ತನೂರು ದಿನ್ನೆಯಲ್ಲಿ ಸಿಮೆಂಟ್ ಹಾಲೋ ಬ್ಲಾಕ್ ಇಟ್ಟಿಗೆ ಕಾರ್ಖಾನೆ ನಡೆಸುತ್ತಾ ಬದುಕು ಸಾಗಿಸುತ್ತಿದ್ದ.
ತಮಿಳುನಾಡಿನ ತಳಿ ಪೊಲೀಸರಿಗೆ ಕಾಡಿನಲ್ಲಿ ಅರೆ ಸುಟ್ಟ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿರುವ ಕುರಿತು ಮಾಹಿತಿ ದೊರಕಿದ್ದರಿಂದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಬೈಕ್ನಲ್ಲಿ ಬಾಬು ಹೋಗುವ ವೇಳೆ ಕಾರಿನಲ್ಲಿ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಿ ತಮಿಳುನಾಡಿನ ಕಾಡಿನಲ್ಲಿ ತಂದು ಸಾಕ್ಷ ನಾಶ ಮಾಡಿ ಸುಳಿವಿಲ್ಲದಂತೆ ಮಾಡಲು ಸುಟ್ಟಿರುವ ಶಂಕೆ ಶಂಕೆ ವ್ಯಕ್ತವಾಗಿದೆ.
ಬಾಬು ಸಹಚರ ವಲಯದಲ್ಲಿ ಬೆಂಗಳೂರಿನ ಶಾಸಕರೊಬ್ಬರ ಕೈವಾಡ ಕೊಲೆಯ ಹಿಂದಿದೆ ಎಂಬ ಗುಸು-ಗುಸು ಸಹ ಕೇಳಿ ಬರುತ್ತಿದೆ.ಸಮಗ್ರ ತನಿಖೆಯ ನಂತರವೇ ಈ ಬಗ್ಗೆ ಸತ್ಯ ಸಂಗತಿ ಹೊರಬರಲಿದೆ.
Previous Articleಉನ್ನತ ಹುದ್ದೆಗಾಗಿ ಹಿರಿಯ ಅಧಿಕಾರಿಗಳ ಲಾಬಿ
Next Article ಇವರೆಲ್ಲ ರಷ್ಯಾಕ್ಕೆ ಬರುವಂತಿಲ್ಲ!