ಬೆಂಗಳೂರು,ಮೇ.21- ಕಾಂಗ್ರೆಸ್ ನೇತೃತ್ವದ ನೂತನ ರಾಜ್ಯ ಸರ್ಕಾರದ ಮಂತ್ರಿ ಜಮೀರ್ ಅಹಮದ್ ಖಾನ್ ಅವರು ಇದೀಗ ನಟ್ಟಿಗರು ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಜಮೀರ್ ಅಹಮದ್ ಖಾನ್ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ತೆಗೆದುಕೊಂಡಿದ್ದರು.
ಇದು ಹಲವು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು ಜಮೀರ್ ಅಹಮದ್ ಖಾನ್ ಹಳೇ ತಪ್ಪನ್ನೇ ಮತ್ತೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.
ಜಮೀರ್ ಅವರ ನಡೆದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಚಿವ ಜಮೀರ್ ಅಹಮದ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಹಿಂದೆಯೂ ಇಂಗ್ಲಿಷ್‌ನಲ್ಲೇ ಪ್ರಮಾಣ ವಚನ ಸ್ವೀಕರಿಸಿ, ಬಳಿಕ ವಿಧಾನಸಭೆಯಲ್ಲಿ ಕ್ಷಮೆಯಾಚನೆ ಮಾಡಿದ್ದ ವಿಚಾರದ ಬಗ್ಗೆ ಪತ್ರಿಕೆಯ ಫೋಟೋ ಹಾಕಿ ಕಿಡಿಕಾರಿದ್ದಾರೆ. ಈಗ ಅದೇ ತಪ್ಪು ಪುನರಾವರ್ತನೆಯಾಗಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ
2005ರಲ್ಲಿ ಜಮೀರ್ ಅಹಮದ್ ಖಾನ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭಾ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು.
ಇದಾದ ನಂತರ ಮತ್ತೆ ಇದೀಗ ಜಮೀರ್ ಅಹ್ಮದ್ ಖಾನ್ ಅವರು ಇಂಗ್ಲಿಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಇದನ್ನು ಪ್ರಶ್ನಿಸಿರುವ ಅವರು ಇಷ್ಟು ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ ಎಂದು ಕೇಳಿದ್ದಾರೆ.
ನಾರಾಯಣಗೌಡ ಅವರು ಮಾಡಿರುವ ಈ ಟ್ವೀಟ್ ಗೆ ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ
ಕರ್ನಾಟಕ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು ಇನ್ನೂ ಕನ್ನಡ ಕಲಿಯದಿರುವುದು ನಾಚಿಕೆಗೇಡು. ಎಲ್ಲ ಸಚಿವರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಜಮೀರ್ ಅಹಮದ್ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಕಾರಣಕ್ಕೆ ಬಂದು ಇಷ್ಟು ವರ್ಷಗಳಾದರೂ ಕನ್ನಡ ಕಲಿಯದಿರುವುದು ಎಷ್ಟು ಸರಿ? ಎಂದು ಮಾಡಿದ್ದಾರೆ.
ಟ್ವೀಟ್‌ನಲ್ಲಿ ನೂರಾರು ಕಮೆಂಟ್‌ಗಳು ಬಂದಿವೆ.
ಕನ್ನಡ ಕಲಿಬೇಕು ಸಚಿವರೇ ಎಂದು ಶೌಕರ್ ಅಲಿ ಕಮೆಂಟ್ ಮಾಡಿದ್ದರೆ, ಭರತ್ ರೆಡ್ಡಿ ಎಂಬುವವರು, “ಕರ್ನಾಟಕದಲ್ಲಿ ಕನ್ನಡ ಓದಲು , ಬರೆಯಲು ಬಾರದ ವ್ಯಕ್ತಿ ಮಂತ್ರಿಯಾಗಲು ಅನರ್ಹ..! ಎಂದು ಕಿಡಿಕಾರಿದ್ದಾರೆ.
Previous Articleಮೋದಿ G7 ಭಾಗವಹಿಸುವಿಕೆ ಸುದ್ದಿ – ಕಾಂಗ್ರೆಸ್ ಟೀಕೆ
Next Article DK Shivakumar ಗೆ ಕೋಪ ಬಂದಿದೆಯಂತೆ!