ಛತ್ತೀಸ್ ಗಡ – ನೀರು ಜೀವ ಜಲ. ನೀವು ಮುಂದಿನ ಪೀಳಿಗೆಗೆ ಮುಂದಿನ ಪೀಳಿಗೆಗೆ ಏನನ್ನಾದರೂ ಕೊಡುವುದಿದ್ದರೆ ನೀರನ್ನು ಮಿತವಾಗಿ ಬಳಸಿ.ನೀರನ್ನು ಉಳಿಸಿ ಎಂದು ದೇಶಾದ್ಯಂತ ವಿವಿಧ ಅಭಿಯಾನಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಆದರೆ, ಇಲ್ಲೊಬ್ಬ ಮಹಾಶಯ ನೀರಿಗೆ ಬಿದ್ದ ತನ್ನ ಫೋನ್ ತೆಗೆದುಕೊಳ್ಳಲು ಇಡಿ ಜಲಾಶಯವನ್ನೇ ಖಾಲಿ ಮಾಡಿದ ಅಪರೂಪದ ವಿಲಕ್ಷಣ ಘಟನೆ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ .
ಛತ್ತೀಸ್‌ಗಡ ಸರ್ಕಾರದ ಆಹಾರ ಇಲಾಖೆಯ
ಇನ್ಸ್ಪೆಕ್ಟರ್ ರಾಜೇಶ್ ವಿಶ್ವಾಸ್ ರಜಾ ನಿಮಿತ್ತ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು.
ಇಲ್ಲಿನ ಪಂಖಜೂರಿನ ಖೇರ್ ಕಟ್ಟಾ ಜಲಾಶಯವನ್ನು ವೀಕ್ಷಿಸಿದ ಅವರು ಜಲಾಶಯದ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.ಈ ವೇಳೆ ಅಚಾನಕ್ಕಾಗಿ ಅವರ ಕೈಯಲ್ಲಿರುವ ಮೊಬೈಲ್ ಜಾರಿ ನೀರಿನೊಳಗೆ ಬಿದ್ದಿದೆ.
ತಕ್ಷಣವೇ ಅವರು ಮತ್ತು ಅವರ ಕಾರಿನ ಚಾಲಕರು ನೀರಿಗೆ ಇಳಿದು ಫೋನ್ ಹುಡುಕಾಡಿದ್ದಾರೆ. ಆದರೆ ಅವರು ಫೋನ್ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ.ಈ ಜಲಾಶಯದಲ್ಲಿ ಸುಮಾರು ಹದಿನೈದು ಅಡಿಗಳಷ್ಟು ನೀರು ಸಂಗ್ರಹವಾಗಿತ್ತು ಎನ್ನಲಾಗಿದೆ.
ನಂತರ 30 ಎಚ್ಪಿ ಮೋಟರ್ ಅಳವಡಿಸಿ ಜಲಾಶಯದ ನೀರನ್ನು ಹೊರ ಬಿಡಲಾಗಿದೆ. ಸೋಮವಾರ ಈ ಘಟನೆ ಆರಂಭಗೊಂಡಿದ್ದು, ಗುರುವಾರ ಬೆಳಿಗ್ಗೆಯವರೆಗೆ ನೀರನ್ನು ಹೊರಬಿಡಲಾಯಿತು.ಆನಂತರಫೋನ್ ಅನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.
ಇದರಿಂದ ಸುಮಾರು 21 ಲಕ್ಷ ಲೀಟರ್ ಖಾಲಿಯಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಛತ್ತೀಸ್ ಗಡ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಉನ್ನತ ತನಿಖೆಗೆ ಆದೇಶಿಸಿದೆ.ಇನ್ನು ಈ ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಕೇಳಿಬಂದಿದ್ದು,ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿ ಜೈಲಿಗೆ ಹಾಕಬೇಕು ಎಂಬ ಆಗ್ರಹ ಕೇಳಿಬಂದಿದೆ