ಬೆಂಗಳೂರು,ಜೂ.6- ಜನಸಾಮಾನ್ಯರಿಗೆ ಸಂಪರ್ಕ ಸಂವಹನ ಯಾವುದೇ ತೊಂದರೆ ಇಲ್ಲದೆ ಕ್ಷಿಪ್ರ ಗತಿಯಲ್ಲಿ ನಡೆಯಬೇಕೆಂಬ ಉದ್ದೇಶದಿಂದ ಸರ್ಕಾರದ ಮಾರ್ಗ ಸೂಚಿಗಳನ್ನು ಆಧರಿಸಿ ದೂರ ಸಂಪರ್ಕ ಸಂಸ್ಥೆಗಳು ಪ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡ್ ವ್ಯವಸ್ಥೆಯನ್ನು ರೂಪಿಸಿವೆ.
ಸಂಪರ್ಕ ಸಂವಹನದ ದೃಷ್ಟಿಯಿಂದ ರೂಪಿಸಲಾದ ಈ ಯೋಜನೆಯನ್ನು ದುರುಪಯೋಗಪಡಿಸಿಕೊಂಡ ಐನಾತಿ ವಂಚಕರು ವ್ಯವಸ್ಥೆಗೆ ಕನ್ನ ಹಾಕಿದ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ
ಆಕ್ಟಿವೇಟೆಡ್ ಸಿಮ್ ಕಾರ್ಡ್ ಗಳನ್ನು ದುರುಪಯೋಗಪಡಿಸಿಕೊಂಡು ಪ್ರತಿಷ್ಠಿತ ಕ್ಯಾಬ್ ಅಪರೇಟೀವ್ ಸಂಸ್ಥೆಗಳಿಗೆ ವಂಚನೆ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ ಪೊಲೀಸರು ಮೂವರುಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮನೋಜ್,ಸಚಿನ್ ಹಾಗೂ ಶಂಕರ್ ಅಲಿಯಾಸ್ ಶಂಕ್ರಿ ಎಂದು ಗುರುತಿಸಲಾಗಿದೆ. ಈ ವಂಚಕರು ನಡೆಸಿದ ಕುಕೃತ್ಯದ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ವಿವರಿಸಿದರು.
ಬಂಧಿತರಿಂದ 1055 ಪ್ರೀ ಅಕ್ಟಿವೇಟೆಡ್ ಮೊಬೈಲ್ ಸಿಮ್ ಕಾರ್ಡ್‍ಗಳು, 15 ಮೊಬೈಲ್ ಪೋನ್, 4 ಲ್ಯಾಪ್‍ಟಾಪ್, ಕಂಪ್ಯೂಟರ್ ಸಿಸ್ಟಮ್‍ಗಳ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಆರೋಪಿಗಳು ನಗರದಲ್ಲಿ ಬಾಡಿಗೆ ವಾಹನ ಸೇವೆ ನೀಡುತ್ತಿರುವ ಉಬರ್, ರಾಪಿಡೋ ಕಂಪನಿಗಳಿಗೆ ಡ್ರೈವರ್ ಗಳನ್ನು ಹಾಗೂ ವಾಹನಗಳನ್ನು ನೋಂದಣಿ ಮಾಡುವ ಸಲುವಾಗಿ ವೆಂಡರ್‍ಶಿಪ್ ಪಡೆದು ಆನ್‍ಲೈನ್ ಮೂಲಕ ಡ್ರೈವರ್ ಮತ್ತು ವಾಹನಗಳನ್ನು ಅಟಾಚ್ ಮಾಡಿಸುತ್ತಿದ್ದರು.
ಇದರಿಂದ ಅಷ್ಟೇನೂ ಲಾಭ ಬರುತ್ತಿಲ್ಲ ಎಂದು ತಿಳಿದ ಅವರು ಒಟ್ಟಾಗಿ ಕುಳಿತು ವಂಚನೆಯ ಕಾರ್ಯ ಯೋಜನೆಯನ್ನು ರೂಪಿಸಿದರು ಇದಕ್ಕಾಗಿ ಅವರು ಬೇರೆಯವರ ಹೆಸರಿನಲ್ಲಿ ಸಾವಿರಾರು ಮೊಬೈಲ್ ಸಿಮ್‍ಕಾರ್ಡ್‍ಗಳನ್ನು ಖರೀದಿಸಿ ಅವುಗಳ ಮೂಲಕ ವಾಹನ ಮತ್ತು ಡ್ರೈವರ್ ಸೇವೆಯ ಗುತ್ತಿಗೆಯನ್ನು ಪಡೆದು ಶುಲ್ಕದ ರೂಪದಲ್ಲಿ ಹಣ ಪಡೆಯುತ್ತಿದ್ದರು ಆನಂತರ, ಯಾವುದೇ ಸಂಚಾರ ಸೇವೆಯನ್ನು ನೀಡದೆ ಸಾಪ್ಟ್ ವೇರ್ ದುರುಪಯೋಗ ಪಡಿಸಿಕೊಂಡು ಸಂಚಾರಿ ಸೇವೆ ನೀಡಿದಂತೆ ಮಾಡಿ ಕಂಪನಿಗಳಿಂದ ಬರುತ್ತಿದ್ದ ಸಾವಿರಾರು ರೂಗಳ ಇನ್‍ಸೆಂಟಿವ್ ಹಣವನ್ನು ಪಡೆದು ಕಂಪನಿಗಳಿಗೆ ಮೋಸ ಮಾಡುತ್ತಿದ್ದರು ಎಂದರು.
ಆರೋಪಿ ಮನೋಜ್ ಉಬರ್ ಮತ್ತು ರೆಪಿಡೊ ಕಂಪನಿಗಳ ವೆಂಡರ್ ಶಿಪ್ ಪಡೆದು ಕೆಲಸ ಮಾಡುತ್ತಿದ್ದ ಮತ್ತೊಬ್ಬ ಆರೋಪಿ ಸಚಿನ್ ಫೈನಾನ್ಸ್ ಕಂಪನಿಯಲ್ಲಿ ಸಾಲ ಕೊಡಿಸುವ ಕೆಲಸ ಮಾಡಿಕೊಂಡಿದ್ದ. ಇನ್ನೊಬ್ಬ ಆರೋಪಿ ಶಂಕ್ರಿ ವೋಡಾಪೋನ್ ಕಂಪನಿಯಲ್ಲಿ ಸಿಮ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದು ಮೂವರು ಸೇರಿ ಸುಲಭವಾಗಿ ಹಣ ಮಾಡುವ ದುರುದ್ದೇಶದಿಂದ ಸಲುವಾಗಿ ಒಳಸಂಚು ರೂಪಿಸಿ ಮನೋಜ್ ಹೊಂದಿದ್ದ ಉಬರ್ ಮತ್ತು ರಾಪಿಡೋ ವೆಂಡರ್ ಶಿಪ್ ಸಹಾಯದಿಂದ ಮನೋಜ್ ಒದಗಿಸುತ್ತಿದ್ದ ದಾಖಲಾತಿಗಳನ್ನು ಬಳಸಿ ಆನ್‍ಲೈನ್‍ನಲ್ಲಿ ಅಪಲೋಡ್ ಮಾಡಿ, ಶಂಕ್ರಿ ನೀಡುತ್ತಿದ್ದ ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡ್‍ಗಳನ್ನು ಬಳಸಿಕೊಂಡು ಕಾರು / ಬೈಕುಗಳು ಓಡುವ ರೀತಿಯಲ್ಲಿ ಮೊಬೈಲ್ ಪೋನ್/ಲ್ಯಾಪ್‍ಟಾಪ್ ಗಳ ಮೂಲಕ ಸಾಪ್ಟ್‍ವೇರ್ ಬಳಸಿ ಯಾವುದೇ ವಾಹನವನ್ನು ಚಲಿಸದೇ ಇದ್ದರೂ ವಾಹನಗಳು ಚಲಿಸಿದ ರೀತಿಯಲ್ಲಿ ಡಾಟಾ ಸೃಷ್ಟಿಸಿ ಕಂಪನಿಗಳಿಂದ ವೆಂಡರ್‍ಗೆ ಬರುವ ಇನ್‍ಸೆಂಟೀವ್ ಹಣವನ್ನು ಅಕ್ರಮವಾಗಿ ಪಡೆದುಕೊಂಡು ಹಂಚಿಕೊಳ್ಳುತ್ತಿರುವುದು ತನಿಖೆಯಲ್ಲಿ ದೃಡಪಟ್ಟಿರುತ್ತದೆ.
ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಅವರುಗಳ ವಿಚಾರಣೆ ಮಾಡಿ ಅವರು ಕೃತ್ಯಕ್ಕೆ ಉಪಯೋಗಿಸುತ್ತಿದ್ದ 1055 ಪ್ರೀ ಅಕ್ಟಿವೇಟೆಡ್ ಮೊಬೈಲ್ ಸಿಮ್‍ಗಳು, 15 ಮೊಬೈಲ್‍ಗಳು, 4 ಲ್ಯಾಪ್‍ಟಾಪ್, ಒಂದು ಕಂಪ್ಯೂಟರ್ ಸಿಸ್ಟಮ್ ಮತ್ತು ಒಂದು ಬಯೋಮೆಟ್ರಿಕ್ ಡಿವೈಸ್ ಇವುಗಳನ್ನು ವಶಪಡಿಸಿಕೊಂಡಿರುತ್ತದೆ. ಈ ಆರೋಪಿಗಳ ವಿರುದ್ದ ಐಪಿಸಿ, ಟೆಲಿಗ್ರಾಪ್ ಆಕ್ಟ್ ಹಾಗೂ ಐಟಿ ಆಕ್ಟ್, ಗಳಡಿಯಲ್ಲಿ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.
Previous ArticleUkraine ದೇಶದ Dam ಧ್ವಂಸ ಮಾಡಿದ Russia
Next Article ಈಕೆಯ ಮನೆಗೆ ಬಾಡಿಗೆಯೇ ಬೇಡವಂತೆ!