ಬೆಂಗಳೂರು – ರಾಜ್ಯ ಸರ್ಕಾರ ಮಹಿಳೆಯರಿಗೆ ಸರ್ಕಾರದ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೇ ಸರ್ಕಾರಿ ಬಸ್ಸುಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಲಭ್ಯವಿರುವ ಎಲ್ಲಾ ಬಸ್ಸುಗಳು ವಿವಿಧ ಮಾರ್ಗಗಲ್ಲಿ ಸಂಚರಿಸುತ್ತಿದ್ದು,ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.
ಇದರ ನಡುವೆ ವಿವಿಧ ಮಾರ್ಗಗಳಲ್ಲಿ ಹೊಸ ಬಸ್ಸುಗಳಿಗೆ ಬೇಡಿಕೆ ಹೆಚ್ಚಿದರೆ,ಇಲ್ಲಿಯವರೆಗೆ ಬಸ್ಸುಗಳ ಸೌಕರ್ಯವಿಲ್ಲದ ಪ್ರದೇಶಗಳಿಂದ ಬಸ್ಸುಗಳಿಗಾಗಿ ಬೇಡಿಕೆ ತೀವ್ರಗೊಂಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಗಳಿಗೆ 4000 ಹೊಸ ವಾಹನಗಳನ್ನು ಒದಗಿಸುವ ಮತ್ತು 13000 ಸಿಬ್ಬಂದಿಗಳ ನೇಮಕಾತಿಗೆ ಅನುಮತಿ ಕೊಡುವ ಜೊತೆಗೆ ಬಜೆಟ್‍ನಲ್ಲಿ 500 ಕೋಟಿ ರೂ.ಗಳನ್ನು ನಿಗಮಗಳಿಗೆ ಬಸ್ ಖರೀದಿಗಾಗಿ ವಿಸ್ತರಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ
ಬಿಎಂಟಿಸಿಯ ಎಲೆಕ್ಟ್ರಿಕ್ ಪ್ರೊಟೊಟೈಪ್ ಬಸ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಘಟಕ ವ್ಯವಸ್ಥಾಪಕರುಗಳಿಗೆ ನೂತನ ವಾಹನಗಳನ್ನು ಒದಗಿಸಲಾಗಿದ್ದು, ಇದರಿಂದ ಅವರು ಬಸ್ ನಿಲ್ದಾಣಗಳು, ಮೋಟಾರು ವಾಹನ ಇಲಾಖೆ, ಅಪಘಾತ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು ಎಂದು ತಿಳಿಸಿದರು.
ನಗರ ಜನತೆ ಬಿಎಂಟಿಸಿಯ ನೂತನ ವಿದ್ಯುತ್ ವಾಹನಗಳಲ್ಲಿ ಪ್ರಯಾಣಿಸಿ ಮಾಲಿನ್ಯ ರಹಿತ ನಗರದ ಅನುಭವವನ್ನು ಪಡೆಯಲಿದ್ದಾರೆ.ನೂತನ 921 ಎಲೆಕ್ಟ್ರಕ್ ಬಸ್ಸುಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನ ಬಲಕ್ಕೆ ಈ ಆರ್ಥಿಕ ವರ್ಷದೊಳಗಾಗಿ ಹಂತ-ಹಂತವಾಗಿ ಸೇರ್ಪಡೆ ಮಾಡುವುದಾಗಿ ಅವರು ತಿಳಿಸಿದರು
ಶಕ್ತಿ ಯೋಜನೆಯಿಂದ ಎಲ್ಲಾ ನಿಗಮದ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪೂರಕವಾಗಿ ಬಸ್ ಗಳ ಸಂಖ್ಯೆ ಹೆಚ್ಚಾಗಿದ್ದು, ಒತ್ತಡ ಇರುವ ಕಡೆ ಬಸ್ ಗಳನ್ನು ಒದಗಿಸಲು ಯೋಜನೆ ನಡೆಸಲಾಗಿದೆ. ಹೀಗಾಗಿ, ಪೂರ್ವಭಾವಿ ಆಗಿ ಎಲೆಕ್ಟ್ರಿಕ್ ಬಸ್ ಗೆ ಚಾಲನೆ ನೀಡಲಾಗುತ್ತಿದೆ. ಶೀಘ್ರದಲ್ಲಿ ಎಲ್ಲಾ ಎಲೆಕ್ಟ್ರಿಕ್ ಬಸ್ ಗಳ ಸೇವೆ ಸಿಗಲಿದೆ ಎಂದರು.ಕೇಂದ್ರ ಸರ್ಕಾರದ ಪೇಮ್-2 ಯೋಜನೆಯಡಿಯಲ್ಲಿ 921 ಎಲೆಕ್ಟ್ರಿಕ್ ಹವಾನಿಯಂತ್ರಣ ರಹಿತ ಬಸ್ಸುಗಳು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರ್ಪಡೆಯಾಗಿವೆ ಎಂದ ಅವರು, ಇ-ಬಸ್ ಗಳು ಕಡಿಮೆ ವ್ಯಚ್ಚದಲ್ಲಿ ನಿರ್ವಹಣೆಯಾಗಲಿದೆ.ಇ-ಬಸ್ ಗಳಿಂದ ಯಾವುದೇ ತೊಂದರೆವಿಲ್ಲ.ಬಸ್ ಗಳನ್ನು ವಿಸ್ತರಿಸುವ ಚಿಂತೆಯೂ ಇದೆ ಎಂದು ಹೇಳಿದರು.ರಾಜ್ಯ ವ್ಯಾಪಿ ಎಲ್ಲಿಯೂ ಸರಕಾರಿ ಬಸ್ ಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಜೊತೆಗೆ ಎಲೆಕ್ಟ್ರಿಕ್ ಬಸ್ ಗಳ ಸಂಖ್ಯೆಯೂ ಹೆಚ್ಚಿಸಲಾಗುವುದು ಎಂದು ಹೇಳಿದರು