ಬೆಂಗಳೂರು, ಸೆ.14 – ಈ ಹಿಂದೆ ಕರಕುಶಲ ಅಭಿವೃದ್ಧಿ ನಿಗಮದಿಂದ ವರ್ಗಾವಣೆಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ (Roopa Moudgil) ಅವರಿಗೆ ಕೊನೆಗೂ ರಾಜ್ಯ ಸರ್ಕಾರ ಹುದ್ದೆ ನೀಡಿ ಅಂತರಿಕ ಭದ್ರತಾ ವಿಭಾಗ (ಎಸ್ ಎಸ್ ಡಿ)ದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಯಾಗಿ ನಿಯೋಜಿಸಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜತೆಗಿನ ವಿವಾದದ ಆರು ತಿಂಗಳ ಬಳಿಕ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್
ಅವರಿಗೆ ಸರ್ಕಾರ ಹುದ್ದೆ ನಿಯೋಜನೆ ಮಾಡಿದೆ.
ದಾವಣಗೆರೆ ಮೂಲದ 2000 ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ರೂಪ ಯಾದಗಿರಿ ಇನ್ನಿತರ ಜಿಲ್ಲೆಗಳ ಎಸ್ ಪಿ ಯಾಗಿ ನಗರದಲ್ಲಿ ಜಂಟಿ ಪೊಲೀಸ್ ಆಯುಕ್ತರಾಗಿ ಗೃಹ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ನಡುವೆ ಕಿತ್ತಾಟ ನಡೆದಿತ್ತು. ಈ ವೇಳೆ ಇಬ್ಬರಿಗೂ ಯಾವುದೇ ಹುದ್ದೆಯನ್ನು ತೋರಿಸದೆ ಹಿಂದಿನ ಬಿಜೆಪಿ ಸರ್ಕಾರ ವರ್ಗಾವಣೆ ಮಾಡಿತ್ತು. ಕಳೆದ 6 ತಿಂಗಳಿನಿಂದ ರೂಪ ಹಾಗೂ ರೋಹಿಣಿ ಸಿಂಧೂರಿಗೆ ಹುದ್ದೆ ನಿರೀಕ್ಷೆಯಲ್ಲಿದ್ದರು.
ನಿನ್ನೆಯಷ್ಟೇ ಕರ್ನಾಟಕ ಗೆಜೆಟಿಯರ್ ಇಲಾಖೆಗೆ ಮುಖ್ಯ ಸಂಪಾದಕರ ಹುದ್ದೆಗೆ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಈಗಿನಿಂದ ಮುಂದಿನ ಆದೇಶದವರೆಗೂ ಮುಖ್ಯ ಸಂಪಾದಕರು ಹುದ್ದೆ ನಿರ್ವಹಿಸುವಂತೆ ಸೂಚಿಸಲಾಗಿತ್ತು.
ಇಲಾಖಾ ತನಿಖೆ:
ಮೈಸೂರು ಜಿಲ್ಲಾಧಿಕಾರಿ ನಿವಾಸ ನವೀಕರಣ, ಬಟ್ಟೆ ಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೆಲ ದಿನಗಳ ಹಿಂದಷ್ಟೇ ಇಲಾಖಾ ತನಿಖೆಗೆ ಸರ್ಕಾರ ಆದೇಶಿಸಿತ್ತು.
ಈ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆದಾಗ, ರೋಹಿಣಿ ಅವರು ಸರಿಯಾದ ಉತ್ತರ ನೀಡಿಲ್ಲ, ದಾಖಲೆಗಳನ್ನೂ ನೀಡಿಲ್ಲ. ಹೀಗಾಗಿ ಇಲಾಖೆ ತನಿಖೆ ನಡೆಸಲು ಸೂಚಿಸಲಾಗಿದೆ.
ನಿವೃತ್ತ ಐಎಎಸ್ ಅಧಿಕಾರಿ ಯೋಗೇಂದ್ರ ತ್ರಿಪಾಠಿ, ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಮಾಡಲಾಗಿದೆ.
ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕೆ.ಆರ್. ನಗರ ಶಾಸಕರಾಗಿದ್ದ ಸಾ.ರಾ. ಮಹೇಶ್ ಕೂಡ ಜಟಾಪಟಿ ನಡೆಸಿದ್ದರು. ವಿಧಾನಸಭೆಯಲ್ಲೂ ಇದರ ಪ್ರಸ್ತಾಪವಾಗಿತ್ತು.