ಬೆಂಗಳೂರು, ಸೆ.27 – ಸೆಪ್ಟೆಂಬರ್ 25 ರಾತ್ರಿ ಬೆಂಗಳೂರಿನಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ವಿಲ್ಸನ್ ಗಾರ್ಡನ್ನ ಏಳನೇ ಕ್ರಾಸ್ನ ಫುಟ್ಪಾತ್ ಬಳಿ ಭಾರಿ ಗಾತ್ರದ ಮರ ಉರುಳಿ ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಇದರಿಂದಾಗಿ ಆ ಮಾರ್ಗದ ಮೂರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ಇದರಲ್ಲಿ ಒಂದು ಕಂಬ ಅಲ್ಲಿನ ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ತಾಯಿ ಮತ್ತು ಮಗಳ ಮೇಲೆ ಬಿದ್ದಿದೆ. ತಕ್ಷಣವೇ ಸ್ಥಳದಲ್ಲಿದ್ದ ನಾಗರೀಕರು ಗಾಯಗೊಂಡವರ ನೆರವಿಗೆ ಧಾವಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ತಾಯಿ ಹೇಮಲತಾ ಮತ್ತು ಅವರ 12 ವರ್ಷದ ಮಗಳನ್ನು ನಿಮ್ಹಾನ್ಸ್ ಗೆ ದಾಖಲಿಸಲಾಯಿತು.ಮಗು ನಿಮ್ಹಾನ್ಸ್ ನಲ್ಲಿ ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಳ್ಳುತ್ತಿದೆ.
ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದುದರಿಂದ ತಾಯಿ ಹೇಮಲತಾ ಅವರನ್ನು ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಈ ಅವಘಡದ ಕುರಿತು ಮಾಹಿತಿ ದೊರಕುತ್ತಿದ್ದಂತೆ ತೀವ್ರ ದಿಗ್ಭ್ರಮೆ ಮತ್ತು ಆಘಾತ ವ್ಯಕ್ತಪಡಿಸಿದ ಇಂಧನ ಸಚಿವ ಕೆ ಜೆ ಚಾರ್ಜ್ (KJ George) ರವರು ಬೆಸ್ಕಾಂನ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಘಟನೆಯ ಸಂಪೂರ್ಣ ವಿವರ ಪಡೆದುಕೊಂಡರು.
ಈ ವೇಳೆ ಅಧಿಕಾರಿಗಳು ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿ ನೀಡಿರುವ ವಿವರ ಒದಗಿಸಿದರು.
ದುರಂತದಲ್ಲಿ ಬೆಸ್ಕಾಂನ ಯಾವುದೇ ತಪ್ಪು ಇಲ್ಲ ಎಂದು ಪೊಲೀಸರು ತನಿಖೆ ನಡೆಸಿದ ವೇಳೆ ಮಾಹಿತಿ ಲಭ್ಯವಾಗಿದೆ ಎಂಬ ಅಂಶವನ್ನು ಅಧಿಕಾರಿಗಳು ಸಚಿವ ಜಾರ್ಜ್ ಅವರ ಗಮನಕ್ಕೆ ತಂದರು ಇದನ್ನು ಆಲಿಸಿದ ಸಚಿವ ಜಾರ್ಜ್ ಅವರು ಈ ದುರಂತದಲ್ಲಿ ಇಲಾಖೆಯ ತಪ್ಪು ಇಲ್ಲ ಎಂದು ನಾವು ಹೇಳಲು ಬರುವುದಿಲ್ಲ ಈ ಘಟನೆಯನ್ನು ಮಾನವೀಯತೆಯಿಂದ ಪರಿಗಣಿಸಬೇಕಾಗಿದೆ. ಹೀಗಾಗಿ ಅಪಘಾತದಲ್ಲಿ ಗಾಯಗೊಂಡಿರುವ ಮಗುವಿನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಇಲಾಖೆ ಬರಿಸಬೇಕು ಹಾಗೆಯೇ ಮೃತ ಮಹಿಳೆಯ ಕುಟುಂಬ ಸದಸ್ಯರಿಗೆ ನಿಯಮಾನುಸಾರ ಪರಿಹಾರ ನೀಡುವಂತೆ ಆದೇಶಿಸಿದರು ಅಲ್ಲವೇ ಮೃತ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು