ಕೊಪ್ಪಳ, ಅ.14 – ಜೀವದ ಹಂಗು ತೊರೆದು ಎದುರಿಗಿದ್ದ 65 ಮಂದಿ ಬಸ್ ಪ್ರಯಾಣಿಕರ ಜೀವ ಸಂರಕ್ಷಣೆ ಮಾಡುವ ಮೂಲಕ ಎಲ್ಲರಿಂದ ಲಾರಿ ಚಾಲಕನೊರ್ವ (Lorry Driver) ಮೆಚ್ಚುಗೆಗೆ ಪಾತ್ರವಾಗಿರುವ ಘಟನೆ ಗಂಗಾವತಿ ತಾಲೂಕಿನ ಚಿಕ್ಕಜಂತಗಲ್ ಕಂಪ್ಲಿ ಸೇತುವೆ ಮಧ್ಯೆ ನಿನ್ನೆ ರಾತ್ರಿ ಸಂಭವಿಸಿದೆ.
ಲಿಂಗಸುಗೂರು ದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಕೆಎಸ್ ಆರ್‌ಟಿಸಿ ಬಸ್ ಹಾಗೂ ಕಂಪ್ಲಿ ಕಡೆಯಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಲಾರಿ ಮಧ್ಯೆ ಅಪಘಾತವಾಗಿದ್ದು ತುಂಗಭದ್ರಾ ನದಿಯ ಸೇತುವೆ ಮಧ್ಯೆ ಭಾಗದಲ್ಲಿ ಘಟನೆ ನಡೆದಿದ್ದರಿಂದ ಬಸ್ ಹಾಗೂ ಲಾರಿ ಎರಡು ಸೇತುವೆಯಿಂದ ಕೆಳಗೆ ಬೀಳುವ ಸಂದರ್ಭದಲ್ಲಿ ಎಚ್ಚೆತ್ತ ಲಾರಿ ಚಾಲಕ ಸುದೀಪ್‌ಕುಮಾರ (32) ಕೂಡಲೇ ಲಾರಿಯನ್ನು ಸೇತುವೆ ಕಟ್ಟೆಯ ಮೇಲೇರಿಸಿದ್ದರಿಂದ ಪ್ರಪಾತಕ್ಕೆ ಬೀಳಬೇಕಿದ್ದ ಬಸ್ ಸೇತುವೆ ಮೇಲೆ ನಿಂತಿದ್ದರಿಂದ ಬಸ್ ನಲ್ಲಿದ್ದ 65 ಜನ ಪ್ರಯಾಣಿಕರ ಜೀವ ಉಳಿದಿದೆ.
ಬಸ್ ಬಲ ಭಾಗ ಮತ್ತು ಲಾರಿಯ ಎಡಭಾಗ ಸ್ವಲ್ಪ ಭಾಗ ನಜ್ಜುಗುಜ್ಜಾಗಿದ್ದು ಬಸ್ ಮತ್ತು ಲಾರಿಯಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಚಿಕ್ಕಜಂತಗಲ್ ಹತ್ತಿರ ತುಂಗಭದ್ರಾ ನದಿಗೆ ಕಂಪ್ಲಿ ಸೇತುವೆ 70 ರ ದಶಕದಲ್ಲಿ ನಿರ್ಮಾಣವಾಗಿದ್ದು ಕೊಪ್ಪಳ, ರಾಯಚೂರು, ಆಂಧ್ರಪ್ರದೇಶ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಲಾರಿ, ಬಸ್ ಸೇರಿ ಎಲ್ಲಾ ವಾಹನಗಳು ಈ ಸೇತುವೆ ಮೇಲಿಂದ ಹೋಗುತ್ತವೆ.
ವಿಸ್ತಾರದಲ್ಲಿ ಚಿಕ್ಕದಾಗಿರುವ ಸೇತುವೆಯ ಮೇಲೆ ಎರಡು ವಾಹನಗಳು ಒಂದೇ ಸಲ ಹೋಗಲು ತೊಂದರೆ ಇದೆ. ರಾತ್ರಿ ವೇಳೆ ಅನೇಕ ಸಲ ಅಪಘಾತಗಳು ನಡೆದಿದ್ದು ಪ್ರಾಣ ಹಾನಿ ಮತ್ತು ಗಾಯಗಳಾದ ಪ್ರಕರಣಗಳು ನಡೆದಿವೆ.ನಿನ್ನೆ ರಾತ್ರಿ ಧರ್ಮಸ್ಥಳಕ್ಕೆ ಹೊರಟಿದ್ದ ಕೆಎಸ್ ಆರ್‌ಟಿಸಿ ಬಸ್ ಹಾಗೂ ಗಂಗಾವತಿ ಕಡೆ ಬರುತ್ತಿದ್ದ ಲಾರಿಗಳು ಸೇತುವೆ ಮಧ್ಯೆದಲ್ಲಿ ಅಪಘಾತವಾಗಿದ್ದು ಇದರಲ್ಲಿ ಸೇತುವೆಯಿಂದ ಬಸ್ ಬೀಳುವುದನ್ನು ಅರಿತ ಲಾರಿ ಚಾಲಕ ಸುದೀಪ್ ಕುಮಾರ ತಾನೇ ಸೇತುವೆಯ ಪಕ್ಕಕ್ಕೆ ಲಾರಿಯನ್ನು ಚಾಲನೆ ಮಾಡಿ ಬಸ್ ಬೀಳುವುದನ್ನು ತಡೆದಿದ್ದಾರೆ.
ಒಂದು ವೇಳೆ ಲಾರಿ (Lorry Driver) ಸೇತುವೆಯಿಂದ ಕೆಳಗೆ ಬಿದ್ದರೂ ಒಬ್ಬಿಬ್ಬರು ಅನಾವುತಕ್ಕೀಡಾಗಬುದು ಬಸ್ ಬಿದ್ದರೆ ಹಲವು ಜನರಿಗೆ ತೊಂದರೆಯಾಗುವುದನ್ನು ಅರಿತು ಸಮಯ ಪ್ರಜ್ಞೆಯಿಂದ ಲಾರಿಯನ್ನು ಸೇತುವೆ ಎಡಭಾಗದ ತಡೆಗೋಡೆ ಮೇಲೆ ಹತ್ತಿಸಿ ನಿಲ್ಲಿಸಿದ್ದಾನೆ. ಇದರಿಂದ ಭಾರಿ ಪ್ರಮಾಣದ ಅನಾವುತ ತಪ್ಪಿದೆ.
ಬಸ್ ನಲ್ಲಿದ್ದ ಪ್ರಯಾಣಿಕರನ್ನು ಚಿಕ್ಕಜಂತಗಲ್ ಸ್ಥಳೀಯರು ಆಗಮಿಸಿ ರಕ್ಷಿಸಿ ಲಾರಿ ಚಾಲಕ ಮಹಾರಾಷ್ಟ್ರ ಮೂಲದ ಸುದೀಪ್ ಕುಮಾರರನ್ನು ಹಾಡಿ ಹೊಗಳಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಸಂಚಾರ ಸುಗಮಗೊಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.