ಚಿಕ್ಕಮಗಳೂರು – ರಾಜ್ಯದಲ್ಲಿ ಕಾಣಿಸಿಕೊಂಡಿರುವ ಬರಗಾಲ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ರೂಪಿಸಿರುವ ಕಾರ್ಯಕ್ರಮ ಸಮರ್ಪಕವಾಗಿ ಜಾರಿಗೊಳಿಸಬೇಕು.ಇದರಲ್ಲಿ ವಿಫಲ ಅಥವಾ ದೋಷವಾದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್(KJ George) ಎಚ್ಚರಿಸಿದ್ದಾರೆ.
ಜಿಲ್ಲಾ ಪ್ರವಾಸದಲ್ಲಿರುವ ಅವರು,ಅಜ್ಜಂಪುರ ಮತ್ತು ಕಡೂರು ತಾಲೂಕಿನ ರಾಮನಹಳ್ಳಿ, ತ್ಯಾರಜ್ಜನಹಳ್ಳಿ, ಬ್ರಹ್ಮಸಮುದ್ರ ಸೇರಿದಂತೆ ಹಲವು ಗ್ರಾಮದಲ್ಲಿ ಬರ ಪರಿಹಾರ ಕಾಮಗಾರಿ ಪರಿಶೀಲಿಸಿ ಜನ ಸಾಮಾನ್ಯರ ಅಹವಾಲು ಆಲಿಸಿದರುಮ
ಬಳಿಕ, ಅಜ್ಜಂಪುರ ಮತ್ತು ಕಡೂರು ತಾಲೂಕಿನ ಅಭಿವೃದ್ಧಿ ಯೋಜನೆಗಳು,ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಚುನಾಯಿತ ಪ್ರತಿನಿಧಿಗಳು,ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಭಾಗವಹಿಸಿದ್ದ ಈ ಸಭೆಯಲ್ಲಿ ತುರ್ತು ಕಾಮಗಾರಿಗಳಿಗೆ ಆದೇಶಿಸಿದರು ಬರ ಪರಿಹಾರ ಕಾಮಗಾರಿ ಹಾಗೂ ಕಾರ್ಯಕ್ರಮಗಳನ್ನು ವಿಳಂಬ ಮಾಡದೆ ಅಧಿಕಾರಿಗಳು ತುರ್ತಾಗಿ ಅನುಷ್ಠಾನಗೊಳಿಸಬೇಕು. ಪ್ರತೀ ಗ್ರಾಮ ಮತ್ತು ಪಟ್ಟಣಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಜಾನುವಾರುಗಳಿಗೆ ಅಗತ್ಯವಿರುವ ಮೇವಿಗೆ ಕೊರತೆಯಾಗದಂತೆ ರೈತರಿಗೆ ಮೇವು ಉತ್ಪಾದನೆಗಾಗಿ ಮೇವಿನ ಬೀಜಗಳ ಕಿಟ್‍ಗಳನ್ನು ವಿತರಿಸಿ ಜಿಲ್ಲೆಗೆ ಸಾಕಾಗುವಷ್ಟು ಮೇವನ್ನು ಬೆಳೆಯಬೇಕು ಎಂದರು.
ಮಲೆನಾಡು ಪ್ರದೇಶದಲ್ಲಿ ಮೇವು ಬೆಳೆಯಲು ಉತ್ತಮ ವಾತಾವರಣವಿದ್ದು, ಪಕ್ಕದ ಜಿಲ್ಲೆಯಿಂದ ಮೇವು ಪೂರೈಕೆಗೆ ಬೇಡಿಕೆ ಬಂದ ಸಂದರ್ಭದಲ್ಲಿ ಮೇವಿನ ಲಭ್ಯತೆಗನುಗುಣವಾಗಿ ಮೇವು ಬೆಳೆದು ಒದಗಿಸಬೇಕೆಂದು ಸೂಚಿಸಿದ ಅವರು, ಸದ್ಯ ಜಿಲ್ಲೆಯಲ್ಲಿ ಜಾನುವಾರುಗಳಿಗೆ ನೀರು, ಮೇವಿನ ಕೊರತೆಯಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಸರ್ಕಾರ ಬರವನ್ನು ಗಂಭೀರವಾಗಿ ಪರಿಗಣಿಸಿದ್ದು, ಬರ ಪರಿಹಾರಕ್ಕೆ ಯಾವುದೇ ರೀತಿಯ ಅನುದಾನದ ಕೊರತೆಯಿಲ್ಲ. ಅಗತ್ಯ ಕೆಲಸಗಳಿಗೆ ಕೋರಿಕೆ ಸಲ್ಲಿಸಿದ ಕೂಡಲೇ ಜಿಲ್ಲಾಧಿಕಾರಿ ಹಣ ಬಿಡುಗಡೆ ಮಾಡುತ್ತಾರೆ. ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳ ಕಾರ್ಯವೈಖರಿ ಮೇಲೆ ನಿಗಾ ವಹಿಸಬೇಕು’ ಎಂದು ಸೂಚಿಸಿದರು.
ಗ್ರಾಮ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳು ಕೇಂದ್ರ ಸ್ಥಾನದಲ್ಲಿದ್ದು ಬರ ಪರಿಸ್ಥಿತಿ ಪರಿಣಾಮಕಾರಿಯಾಗಿ ಎದುರಿಸಬೇಕು’ ಎಂದು ಅವರು ಆದೇಶಿಸಿದರು.