ಬೆಂಗಳೂರು, ನ.30: ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಕಲಾಪ ಅರ್ಥಪೂರ್ಣವಾಗಿ ನಡೆಯಬೇಕು.ಈ ಮೂಲಕ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಉತ್ತರಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯೇ ಆಗಿಲ್ಲ. ಈ ಬಾರಿಯಾದರೂ ಚರ್ಚೆಯಾಗುತ್ತಾ ನೋಡಬೇಕಿದೆ ಎಂದು ಹೇಳಿದರು.
ನಿಗಮ ಮಂಡಳಿಗಳ ನೇಮಕಾತಿ ಸಮಯದಲ್ಲಿ ಹೊಸಬರಿಗೆ ಅವಕಾಶ ಇಲ್ಲವೇ ಇಲ್ಲ ಎಂದು ಮೊದಲೇ ಹೇಳಲಾಗಿತ್ತು. ಈಗಲೂ ಅದನ್ನೇ ಹೇಳುತ್ತಿದ್ದಾರೆ. ಮೊದಲ ಸಲ ಆಯ್ಕೆಯಾದವರಿಗೆ ಅವಕಾಶ ಇಲ್ಲ. ಮೂರು ನಾಲ್ಕು ಬಾರಿ ಗೆದ್ದವರಿಗೆ ನಿಗಮ ಮಂಡಳಿ ನೀಡಲು ಪಕ್ಷ ಬದ್ದವಾಗಿದೆ ಎಂದು ತಿಳಿಸಿದರು.
ಹಿರಿಯರಿಗೆ ಅವಕಾಶ ಮಾಡಿಕೊಟ್ಟರೆ ಯಾವುದೇ ಭಿನ್ನಮತಗಳು ಇರುವುದಿಲ್ಲ ಹೀಗಾಗಿ ಇಂತಹ ತೀರ್ಮಾನಕ್ಕೆ ಬರಲಾಗಿದೆ.ನಮ್ಮ ಜಿಲ್ಲೆಯಲ್ಲಿ ಮೂವರು ಹಿರಿಯರಿದ್ದಾರೆ. ಅವರಿಗೆ ನಿಗಮ ಮಂಡಳಿ ಕೊಟ್ಟೇ ಕೊಡ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ ಅವರು ಶೀಘ್ರವಾಗಿ ನಿಗಮ ಮಂಡಳಿ ನೇಮಕವಾಗಬೇಕು. ಸದನ ಪ್ರಾರಂಭ ಆಗುವ ಮೊದಲೇ ನೇಮಕವಾದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು ನಿಗಮ ಮಂಡಳಿ ನೇಮಕಾತಿ ವೇಳೆಯಲ್ಲಿ ಹಿರಿಯರ ಅಭಿಪ್ರಾಯ ಪಡೆದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಧಾನಕ್ಕೆ ದನಿಗೂಡಿಸಿದ ಸತೀಶ್ ಜಾರಕಿಹೊಳಿ, ಹೌದು, ಪರಮೇಶ್ವರ್ ಅಭಿಪ್ರಾಯ ಕೇಳಬೇಕಿತ್ತು. ಅವರು ಎಂಟು ವರ್ಷ ಅವರು ಅಧ್ಯಕ್ಷರಾಗಿದ್ದವರು. ಪಕ್ಷದ ಭಾಗವಾಗಿದ್ದರು. ಅವರ ಸಲಹೆ ಕೂಡ ಪಡೆಯಬೇಕಿತ್ತು ಎಂದರು.
ಗುತ್ತಿಗೆದಾರರ ಬಿಲ್‍ಗಳು ಬಾಕಿ ಉಳಿದಿರುವ ಕುರಿತು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಗಾದೆ ಇಲ್ಲ. ಬಿಬಿಎಂಪಿಯಲ್ಲಿ ಬಿಲ್ ಬಾಕಿ ಇರುವ ಕುರಿತಂತೆ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಆ ವಿಷಯವಾಗಿ ವಿಚಾರಣೆಯಾಗಿದೆ. ನಮ್ಮ ಇಲಾಖೆಯಲ್ಲಿ ಸಾಧ್ಯವಾದಷ್ಟು ಬಾಕಿಯನ್ನು ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.