ನವದೆಹಲಿ – ರಾಜ್ಯದ ಪ್ರಭಾವಿ ನಾಯಕ ಹಾಗೂ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge ) ಅವರನ್ನು ಎನ್.ಡಿ.ಎ.ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ತೀರ್ಮಾನಿಸಲಾಗಿದೆ.
ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸೇರಲಾಗಿದ್ದ ಇಂಡಿಯಾ ಮೈತ್ರಿ ಕೂಟದ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಮೈತ್ರಿ ಕೂಟ ಪ್ರಧಾನಿ ಅಭ್ಯರ್ಥಿ ಹೆಸರನ್ನು ಘೋಷಿಸಬೇಕು ಎಂದು ಪ್ರಸ್ತಾಪಿಸಿದರು.ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು ತಕ್ಷಣವೇ ಅವರು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಬೇಕು ಎಂದು ಹೇಳಿದರು. ಅದಕ್ಕೆ ಎಲ್ಲಾ ನಾಯಕರು ಒಕ್ಕೊರಲ ಬೆಂಬಲ ವ್ಯಕ್ತಪಡಿಸಿದರು ಎನ್ನಲಾಗಿದೆ.
ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಲಿತ ಮುಖವನ್ನು ಮುಂಚೂಣಿಯಲ್ಲಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ಯೋಜನೆಯನ್ನು ಮೈತ್ರಿಕೂಟ ರೂಪಿಸಿದೆ.
ಆದರೆ,ಮಲ್ಲಿಕಾರ್ಜುನ ಖರ್ಗೆ ಅವರು ನಯವಾಗಿಯೇ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ತಾವು ದೀನದಲಿತರಿಗಾಗಿ ಮಾತ್ರ ಕೆಲಸ ಮಾಡಲು ಬಯಸುತ್ತೇನೆ ತಮಗೆ ಉನ್ನತ ಹುದ್ದೆಯ ಯಾವುದೇ ಆಕಾಂಕ್ಷೆ ಇಲ್ಲ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುವ ಮೂಲಕ ಹತ್ತು ವರ್ಷಗಳ ಬಿಜೆಪಿ ಆಡಳಿತ ಕೊನೆಗಾಣಿಸೋಣಾ ಎಂದು ಹೇಳಿದರೆನ್ನಲಾಗಿದೆ.
ಇಂಡಿಯಾ ಮೈತ್ರಿಕೂಟದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ವೈಕೊ ಅವರು, ಖರ್ಗೆ ಅವರ ಹೆಸರನ್ನು ಮಮತಾ ಬ್ಯಾನರ್ಜಿ ಮತ್ತು ಕೇಜ್ರಿವಾಲ್ ಪ್ರಸ್ತಾಪ ಮಾಡಿದರು. ಆದರೆ ಸಭೆಯಲ್ಲಿ ಅಂತಿಮವಾಗಿ ಯಾವುದೇ ತೀರ್ಮಾನವಾಗಲಿಲ್ಲ ಎಂದು ಹೇಳಿದರು.