ಮುಂಬೈ,ಡಿ.20- ಬಹುಭಾಷಾ ನಟಿ ಸೌತ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ (Deepfakes) ವಿಡಿಯೋ ಪ್ರಕರಣಕ್ಕೆ ಸಂಬಂಧ ದೆಹಲಿ ಪೊಲೀಸರು ನಾಲ್ವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ನಟಿಯ ಡೀಪ್‌ಫೇಕ್ ವಿಡಿಯೊವನ್ನು ಈ ನಾಲ್ವರು ಅಪ್‌ಲೋಡ್ ಮಾಡಿದ್ದು,ಇವರ ಮಾಹಿತಿಯನ್ನು ಮೆಟಾ ಒದಗಿಸಿದ ಬೆನ್ನಲ್ಲೇ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
ರಶ್ಮಿಕಾ ಅವರ ಡೀಪ್‌ಫೇಕ್ ವಿಡಿಯೊಗಳನ್ನು ನಕಲಿ ಗುರುತು ಮತ್ತು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಬಳಸಿ ಅಪ್ ಲೋಡ್ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ಶಂಕಿತರು ಡೀಪ್‌ಫೇಕ್ ವಿಡಿಯೊವನ್ನು ಸೃಷ್ಟಿಸಿಲ್ಲ. ಕೇವಲ ಅಪ್‌ಲೋಡ್ ಮಾಡಿದ್ದಾರೆ. ಹೀಗಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಏನಿದು ಪ್ರಕರಣ:
ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ವಿಡಿಯೋ ಕಳೆದ ತಿಂಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ರಶ್ಮಿಕಾ ಅವರ ಮುಖವನ್ನು ಹೊಂದಿರುವ, ಟೈಟ್ ಫಿಟ್ ಉಡುಪನ್ನು ಧರಿಸಿರುವ ಮಹಿಳೆ ಲಿಫ್ಟ್ ಹತ್ತುತ್ತಿರುವುದು ಕಂಡುಬಂದಿತ್ತು. ಬಳಿಕ ಈ ವಿಡಿಯೊ ಡೀಪ್‌ಫೇಕ್ ಎನ್ನುವುದು ತಿಳಿದುಬಂತು. ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಧ್ವನಿ ಎತ್ತಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ ನಂತರ ಇದು ಎಲ್ಲರ ಗಮನ ಸೆಳೆಯಿತು. ಬಳಿಕ ಕಲಾವಿದರಾದ ನಾನಿ, ವಿಜಯ್ ದೇವರಕೊಂಡ, ನಾಗ ಚೈತನ್ಯ ಮತ್ತು ಮೃಣಾಲ್ ಠಾಕೂರ್ ಮತ್ತಿತರರು ಡೀಪ್‌ಫೇಕ್ ವಿಡಿಯೊ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ರಶ್ಮಿಕಾ ಮಂದಣ್ಣ ಕೂಡ ತಮ್ಮ ವೈರಲ್ ಡೀಪ್‌ಫೇಕ್ ವಿಡಿಯೊದಿಂದ ಆಘಾತಗೊಂಡಿದ್ದರು. ಇದನ್ನು ‘ಭಯಾನಕ’ ಎಂದು ಕರೆದಿದ್ದರು.
ದೂರು ದಾಖಲು:
ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ಫೋರ್ಜರಿ), 469 (ವ್ಯಕ್ತಿಯ ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದ ಫೋರ್ಜರಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಸಿ ಮತ್ತು 66 ಇ ಅಡಿಯಲ್ಲಿ ದೆಹಲಿ ಪೊಲೀಸರ ಐಎಫ್ಎಸ್ಒ ಘಟಕದಲ್ಲಿ ಎಫ್ಐಆರ್ ದಾಖಲಾಗಿತ್ತು.
ನಂತರ ನಟಿಯ ಡೀಪ್‌ಫೇಕ್ ವಿಡಿಯೊ ಯಾವ ಖಾತೆಯಿಂದ ಬಂದಿದೆ ಎಂಬುದರ ಯುಆರ್‌ಎಲ್ ಒದಗಿಸುವಂತೆ ದೆಹಲಿ ಪೊಲೀಸರು ಮೆಟಾಗೆ ಪತ್ರ ಬರೆದಿದ್ದರು. ಅದರಂತೆ ಮೆಟಾ ಮಾಹಿತಿ ಹಂಚಿಕೊಂಡಿತ್ತು.
ಡೀಪ್‌ಫೇಕ್:
ಡೀಪ್‌ಫೇಕ್’ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಿದ ವಿಡಿಯೊಗಳು. ಇವು ನೈಜವಾಗಿಯೇ ಕಾಣಿಸುತ್ತವೆ. ಡೀಪ್‌ಫೇಕ್ ವಿಡಿಯೊದಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ವ್ಯಕ್ತಿಗಳ ದೇಹ ಮತ್ತು ಮುಖವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಿ ಜೋಡಿಸಿ ಸಹಜವಾಗಿ ಕಾಣುವಂತೆ ಮಾಡಲಾಗುತ್ತದೆ