ಬೆಂಗಳೂರು, ಡಿ.20-ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ಪತ್ನಿಯು ಅಕ್ರಮ ಸಂಬಂಧ ಹೊಂದಿರುವುದು ಗೊತ್ತಾಗಿ ತೀವ್ರ ಮನನೊಂದು ಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ (Suicide) ಮಾಡಿಕೊಂಡ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಯಶವಂತಪುರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ರಮೇಶ್ (45) ಪತ್ನಿ ಶಿಲ್ಪಾ, ಸಂಜು ಹಾಗೂ ಮತ್ತೊಬ್ಬ ಸಹೋದ್ಯೋಗಿಯನ್ನು ಬಂಧಿತ ಆರೋಪಿಗಳಾಗಿದ್ದಾರೆ.
ಕೊರಟಗೆರೆ ತಾಲೂಕಿನ ಲಕ್ಷ್ಮೀಪುರದ ರಮೇಶ್ ತಮ್ಮ ಪತ್ನಿ ಜೊತೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ಅವರ ಜೊತೆಗೆ ಕೆಲಸ ಮಾಡುತ್ತಿದ್ದ ಇಬ್ಬರು ಸಹೋದ್ಯೋಗಿಗಳೊಂದಿಗೆ ರಮೇಶ್ ಪತ್ನಿ ಶಿಲ್ಪಾ ಅಕ್ರಮ ಸಂಬಂಧ ಹೊಂದಿದ್ದಳು.
ಇದನ್ನು ತಿಳಿದು ಮನನೊಂದ ರಮೇಶ್ ತನ್ನ ಪತ್ನಿ ಮತ್ತು ಇಬ್ಬರು ಸಹೋದ್ಯೋಗಿಗಳ ಹೆಸರನ್ನು ವಾಟ್ಸಾಪ್ ಸ್ಟೇಟಸ್ ಗೆ ಹಾಕಿ ಕಳೆದ ಡಿ.17ರ ಬೆಳಗ್ಗೆ 10.30ಕ್ಕೆ ಸೋಲದೇವನಹಳ್ಳಿ ಬಳಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಸಾವಿಗೆ ಶರಣಾಗಿದ್ದು, ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು
ಆತನ ಪತ್ನಿ ಶಿಲ್ಪಾ, ಸಂಜು ಹಾಗೂ ಮತ್ತೊಬ್ಬ ಸಹೋದ್ಯೋಗಿಯನ್ನು ಯಶವಂತಪುರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ತಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿ ರಮೇಶ್ ಶಿಲ್ಪಾಳನ್ನ ಭೇಟಿಯಾಗಿ ಪರಿಚಯ ಪ್ರೇಮಕ್ಕೆ ತಿರುಗಿ, ಇಬ್ಬರು 2004 ರಲ್ಲಿ ವಿವಾಹವಾಗಿದ್ದು, ಪತ್ನಿ ಮತ್ತು ಇಬ್ಬರು ಆರೋಪಿಗಳು ಒಂದೇ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ರಮೇಶ್ ಆತ್ಮಹತ್ಯೆ ಮಾಡಿಕೊಂಡ ನಂತರ, ಹಳಿಗಳ ಮೇಲೆ ಅಪರಿಚಿತ ಶವವಿರುವ ಬಗ್ಗೆ ಯಶವಂತಪುರ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿದಾಗ ರಮೇಶ್ ಶವದ ಪಕ್ಕದಲ್ಲಿದ್ದ ಮೊಬೈಲ್ ಗೆ ಕರೆ ಬಂದಿತ್ತು.
ಪೊಲೀಸರು ಉತ್ತರಿಸಿದಾಗ, ಕರೆ ಮಾಡಿದವರು ತಾವು ರಮೇಶ್ ಸಂಬಂಧಿಕರು ಎಂದು ಹೇಳಿ ವಾಟ್ಸಾಪ್ ಸ್ಟೇಟಸ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ರಮೇಶ್ ಜತೆ ನಿಕಟ ಸ್ನೇಹಿತರಾಗಿದ್ದು, ಅವರ ಮನೆಗೆ ನಿತ್ಯ ಭೇಟಿ ನೀಡುತ್ತಿದ್ದರು. ಪತ್ನಿ ಜತೆಗಿನ ಅಕ್ರಮ ಸಂಬಂಧ ರಮೇಶನಿಗೆ ಗೊತ್ತಿರಲಿಲ್ಲ. ದಂಪತಿಗೆ ಪದವಿ ವ್ಯಾಸಂಗ ಮಾಡುತ್ತಿರುವ ಮಗಳಿದ್ದಾಳೆ. ಮೂವರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ವಿರುದ್ಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.

