ಬೆಂಗಳೂರು,ಜ.1: ಹೊಸ ವರ್ಷದ ಮೊದಲ ದಿನವೆಂದರೆ,ಮಂತ್ರಿ ಮಹೋದಯರು,ಹಿರಿಯ ಅಧಿಕಾರಿಗಳು, ಬೆಂಬಲಿಗರು,ಆಪ್ತರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸುವುದು ಮಾಮೂಲಿಯಾದ ಸಂಗತಿ.
ಆದರೆ ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ವರ್ಷದ ಮೊದಲ ದಿನ ಅತ್ಯಂತ ವಿಭಿನ್ನವಾಗಿ ವರ್ಷದ ಮೊದಲ ದಿನವನ್ನು ಬರಮಾಡಿಕೊಂಡು ಹಲವರ ಬದುಕಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿದರು.
ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಕೆಲವರು ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಅಪಘಾತಕ್ಕೆ ಬಲಿಯಾಗಿದ್ದಾರೆ.ಅಂತಹವರ ಕುಟುಂಬ ಸದಸ್ಯರನ್ನು ಕೇಂದ್ರ ಕಚೇರಿಗೆ ಆಹ್ವಾನಿಸಿ,ಇಲಾಖೆಯ ವತಿಯಿಂದ ಅವರಿಗೆ ನೀಡಬೇಕಾದ ಪರಿಹಾರ ಮತ್ತಿತರ ಸೌಲಭ್ಯಗಳನ್ನು ವಿತರಿಸಿ ಅವರೊಂದಿಗೆ ಹೊಸ ವರ್ಷ ಆಚರಿಸಿದರು.
ಮೃತರ ಅವಲಂಬಿತರ ಕುಟುಂಬದವರಿಗೆ ಒಂದು ಕೋಟಿ ರೂಪಾಯಿ ಪರಿಹಾರ ಸೀರೆ ಮತ್ತು ಸಿಹಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು ಮನೆಯ ಸದಸ್ಯನನ್ನು ಕಳೆದುಕೊಂಡ ಕುಟುಂಬದವರಿಗೆ ಯಾವ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದರೆ ಆರ್ಥಿಕವಾಗಿ ಅವರಿಗೆ ಶಕ್ತಿ ಮತ್ತು ಭದ್ರತೆಯನ್ನು ಒದಗಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕೋಟಿ ಹಣದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಮನೆ ಮಾಡಿಕೊಂಡು ಯಾರನ್ನು ಅವಲಂಬಿಸದೆ ಬದುಕು ನಡೆಸಬಹುದಾಗಿದೆ ಎಂದರು.
ಈ ಹಿಂದೆ ಅಪಘಾತ ಸೇರಿದಂತೆ ಇತರ ಕಾರಣಗಳಿಂದ ಮೃತಪಟ್ಟ ಕುಟುಂಬದವರಿಗೆ ಇಲಾಖೆಯ ವತಿಯಿಂದ 3 ಲಕ್ಷ ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿತ್ತು.ಆದರೆ ಈಗ ಇದನ್ನು ಬದಲಾಯಿಸಿ ಸಾರಿಗೆ ಸುರಕ್ಷಾ ಅಪಘಾತ ವಿಮಾ ಪರಿಹಾರ ಯೋಜನೆ ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.
ಈ ಯೋಜನೆ ಅನ್ವಯ ನಿಗಮದಲ್ಲಿ ಸೇವೆಯಲ್ಲಿರುವಾಗ ಸಿಬ್ಬಂದಿಗಳು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅದೇರೀತಿ ಖಾಸಗಿ ಸಿಬ್ಬಂದಿ ಕರ್ತವ್ಯ ನಿರತರಾಗಿದ್ದ ವೇಳೆ ಅಪಘಾತದಲ್ಲಿ ಅಂಗನ್ಯೂನ್ಯತೆಗೆ ಒಳಗಾದಲ್ಲಿ ಸಿಬ್ಬಂದಿಗಳಿಗೆ ಹೆಚ್ಚಿನ ಮೊತ್ತದ ಆರ್ಥಿಕ ಪರಿಹಾರ ಒದಗಿಸುವ ಮೂಲಕ ಅವರ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ 50 ಲಕ್ಷ (ಯುನೈಟೆಡ್ ಇಂಡಿಯಾ ಇನ್ಸುರೆನ್ಸ್) ಹಾಗೂ SBI Corporate Salary Package ಅಡಿಯಲ್ಲಿ 50 ಲಕ್ಷ ರೂ. ನೀಡಲಾಗುತ್ತಿದೆ ಎಂದು ವಿವರಿಸಿದರು ಯೋಜನೆ ಅಡಿಯಲ್ಲಿ ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟ ನೌಕರರ ನಾಮನಿರ್ದೇಶಿತರಿಗೆ ಒಟ್ಟು 1 ಕೋಟಿ ರೂ. ಅಪಘಾತ ವಿಮಾ ಮೊತ್ತವನ್ನು ನೀಡಲಾಗುತ್ತದೆ.
ಸಾರಿಗೆ ನಿಗಮಗಳಲ್ಲಿ ದೇಶದಲ್ಲಿಯೇ ಈ ಯೋಜನೆಯನ್ನು ಪ್ರಥಮ ಬಾರಿಗೆ ಕರಾರಸಾ ನಿಗಮದಲ್ಲಿ ಜಾರಿಗೊಳಿಸಲಾಗಿತ್ತು, ನಂತರ ಇತರೆ ನಿಗಮಗಳಲ್ಲಿಯೂ ಜಾರಿಗೆಗೊಳಿಸಲಾಗಿದೆ ಎಂದು ತಿಳಿಸಿದರು ಈ ಯೋಜನೆ ಜಾರಿಯಾದ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.ಅವರಲ್ಲಿ ಇದುವರೆವಿಗೂ 9 ನೌಕರರ ಕುಟುಂಬದವರಿಗೆ ತಲಾ 1 ಕೋಟಿ ರೂ.ಗಳ ಅಪಘಾತ ವಿಮಾ ಮೊತ್ತವನ್ನು ವಿತರಿಸಲಾಗಿದೆ.ಇದೀಗ ಮೃತಪಟ್ಟ ಮೂವರು ನೌಕರರ ಅವಲಂಬಿತರಿಗೆ 1 ಕೋಟಿ ರೂ.ಗಳ ಅಪಘಾತ ವಿಮಾ ಮೊತ್ತವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.